ಬಂಟ್ವಾಳ: ರಸ್ತೆ ಅತಿಕ್ರಮಣ ಮಾಡಿದ ಅಂಗಡಿ ಶೆಡ್, ಅನಧಿಕೃತ ಗೂಡಂಗಡಿಗಳನ್ನು ವಾರದೊಳಗೆ ತೆರವುಮಾಡಿ ಇಲ್ಲದಿದ್ದರೆ ಬುಲ್ಡೋಜರ್ ಮಾದರಿಯನ್ನು ಇಲ್ಲೂ ಅನುಸರಿಸಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪುರಸಭಾ ಅಧಿಕಾರಿಗಳು ಮೌಖಿಕವಾಗಿ ಅಂಗಡಿ ಮಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

ಗುರುವಾರದಂದು ಪುರಸಭಾ ಇಲಾಖೆಯ ಅಧಿಕಾರಿಗಳು ಕೈಕುಂಜೆ ರಸ್ತೆಯಲ್ಲಿ ಇರುವ ಗೂಡಂಗಡಿ ಮಾಲಕರಿಗೆ ಹಾಗೂ ರಸ್ತೆಯನ್ನು ಅತಿಕ್ರಮಣ ಮಾಡಿ ವ್ಯಾಪಾರ ಮಾಡುತ್ತಿರುವ ಅಂಗಡಿ ಮಾಲಕರಿಗೆ ಈ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ವಾರದೊಳಗಾಗಿ ಎಲ್ಲಾ ಅತಿಕ್ರಮಣ ಮಾಡಿ ವ್ಯಾಪಾರ ವಹಿವಾಟು ನಡೆಸುವುದನ್ನು ನಿಲ್ಲಿಸಿ ಅಂಗಡಿ ಮುಂಭಾಗದಲ್ಲಿ ಹಾಕಿರುವ ಶೀಟ್ ಗಳನ್ನು ತೆರವು ಮಾಡಬೇಕು, ಹಾಗೂ ರಸ್ತೆ ಬದಿಯಲ್ಲಿ ಅನಧಿಕೃತ ವಾಗಿ ಕಾರ್ಯಚರಿಸುತ್ತಿರುವ ಗೂಡಂಗಡಿಗಳನ್ನು ತೆರವುಮಾಡಿ ಎಂದು ಮೌಖಿಕವಾಗಿ ತಿಳಿಸಿಹೋಗಿದ್ದು, ಇಲ್ಲದಿದ್ದರೆ ಬುಲ್ಡೋಜರ್ ಮೂಲಕ ತೆರವುಮಾಡುವ ಪ್ರಕ್ರಿಯೆ ನಡೆಯಲಿದೆ ಎಂಬ ಮಾತನ್ನು ಹೇಳಿ ಹೋಗಿದ್ದಾರೆ ಎಂದು ಅಂಗಡಿ ಮಾಲಕರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಅಂಗಡಿ ಮಾಲಕರು ಹಾಗೂ ಪುರಸಭಾ ಇಲಾಖೆಯ ಅಧಿಕಾರಿಗಳ ಜೊತೆ ವಾಗ್ವಾದ ಕೂಡ ನಡೆದಿದೆ ಎನ್ನಲಾಗಿದ್ದು, ಕೈಕಂಬ, ಗೂಡಿನ ಬಳಿ, ಪಾಣೆಮಂಗಳೂರು, ಬಂಟ್ವಾಳ ,ಮೆಲ್ಕಾರ್ ಹಾಗೂ ಇತರ ಕಡೆಗಳಲ್ಲಿ ಅತಿಕ್ರಮಣ ಮಾಡಲಾಗಿರುವ ಅಂಗಡಿಗಳನ್ನು ಹಾಗೂ ಅಕ್ರಮ ಗೂಡಂಗಡಿಗಳನ್ನು ಮೊದಲು ತೆರವು ಮಾಡಿ, ಅ ಬಳಿಕ ನಾವು ತೆಗೆಯುತ್ತೇವೆ ಎಂದು ಜೋರಾಗಿ ಹೇಳಿದ್ದಾರೆ ಎಂದು ಹೇಳಲಾಗಿದೆ.
ಅ ಬಳಿಕ ಕೈಕಂಬಕ್ಕೆ ತೆರಳಿದ ಪುರಸಭಾ ಇಲಾಖೆಯ ಅಧಿಕಾರಿಗಳು ಅಲ್ಲಿ ರಸ್ತೆ ಅತಿಕ್ರಮಣ ಮಾಡಿ ವ್ಯಾಪಾರ ಮಾಡುವ ಅಂಗಡಿ ಮಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ತೆರವು ಮಾಡುವಂತೆ ಅದೇಶ ಮಾಡಿದ್ದಾರೆ. ವಾರದ ಹಿಂದೆ ನಡೆದ ಪುರಸಭಾ ಸಾಮಾನ್ಯ ಸಭೆಯಲ್ಲಿ ಬೀದಿ ವ್ಯಾಪಾರ ಹಾಗೂ ರಸ್ತೆ ಅತಿಕ್ರಮಣ ಮಾಡಿದ ಅಂಗಡಿಗಳನ್ನು ತೆರವು ಮಾಡಲು ಕ್ರಮಕೈಗೊಳ್ಳಿ ಎಂದು ಸದಸ್ಯರು ಒತ್ತಾಯ ಮಾಡಿದ್ದರು.

ಆದರೆ ಈ ವಿಚಾರ ಅನೇಕ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತ್ತು ವಿನ: ಕಾರ್ಯರೂಪಕ್ಕೆ ತರಲು ಸಾಧ್ಯವಾಗಿರಲಿಲ್ಲ. ಪುರಸಭಾ ಇಲಾಖೆಯಿಂದ ಸರಕಾರದ ಅದೇಶದಂತೆ ಬೀದಿಬದಿ ವ್ಯಾಪಾರಕ್ಕೆ ಸಾಲ ಹಾಗೂ ಇಲಾಖೆಯಿಂದ ಅಧಿಕೃತ ಕಾರ್ಡ್ ನೀಡಲಾಗಿದೆ. ಹಾಗಾಗಿ ಪುರಸಭೆ ಅಧಿಕೃತವಾಗಿ ವ್ಯಾಪಾರ ಮಾಡಲು ಅವಕಾಶ ನೀಡಿದ ಮೇಲೆ ಅವರನ್ನು ಅನಧಿಕೃತ ಅಂಗಡಿಗಳು ಎಂದು ತೆರವು ಮಾಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದ್ದರು.
ಅವರಿಗೆ ಪುರಸಭೆಯಿಂದ ನೀಡಲಾಗಿರುವ ಕಾರ್ಡ್ ನ್ನು ಕ್ಯಾನ್ಸಲ್ ಮಾಡಿದರೆ ಅಂತಹ ಗೂಡಂಗಡಿಗಳನ್ನು ತೆರವು ಮಾಡಬಹುದು ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಅದಾದ ಬಳಿಕ ಆಧಿಕಾರಿಗಳು ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಿ ಅಂಗಡಿ ಮಾಲಕರಿಗೆ ಮೌಖಿಕ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ ಎಂದು ಅಂಗಡಿ ಮಾಲಕರು ಆರೋಪ ಮಾಡಿದ್ದಾರೆ.
ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಿಸಿರೋಡಿನ ಹೃದಯ ಭಾಗದಲ್ಲಿ ಅಂದರೆ ಬಸ್ ನಿಲ್ದಾಣದ ಬಳಿ ಇರುವ ಪ್ಲೈ ಓವರ್ ನ ಅಡಿಭಾಗದ ಇಂಟರ್ ಲಾಕ್ ಅಳವಡಿಸಿದ ಜಾಗದಲ್ಲಿ ಅನಧಿಕೃತ ವಾರದ ಸಂತೆ ಅಧಿತ್ಯವಾರ ನಡೆದರೆ ಉಳಿದ ದಿನಗಳಲ್ಲಿ ಬೀದಿಬದಿಯ ಬೇರೆ ಬೇರೆ ವ್ಯಾಪಾರಗಳು ನಡೆಯುವುದು ಮುಂದುವರಿದಿದೆ.
ಬೀದಿ ಬದಿ ವ್ಯಾಪಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.