ಬೆಂಗಳೂರು: ವಿಧಾನಸೌಧ ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಂಡ್ಯ ಮೂಲದ ಸರ್ಕಾರಿ ನೌಕರನೊಬ್ಬನ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ.

ಜಗದೀಶ್ ಬ್ಯಾಗ್‌ನಲ್ಲಿ ಶಕ್ತಿ ಸೌಧಕ್ಕೆ 10.5 ಲಕ್ಷ ರೂ. ನಗದು ಸಾಗಿಸುತ್ತಿದ್ದಾಗ ಸಹಾಯಕ ಇಂಜಿನಿಯರ್ ಸಿಕ್ಕಿಬಿದ್ದಿದ್ದಾರೆ. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಿನ್ನೆ ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಎಂಬುವವರು ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದರು.
ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಮಂಡ್ಯ ಮೂಲದ ಜಗದೀಶ್ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ. ಆದರೆ ಹಣದ ಮೂಲದ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಈ ವ್ಯಕ್ತಿ ನೀಡಿಲ್ಲ.
ಈ ಹಿನ್ನೆಲೆಯಲ್ಲಿ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ಕೂಡಾ ದಾಖಲಾಗಿದೆ. ಹಣ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಈ ವ್ಯಕ್ತಿ ಇಷ್ಟು ಮೊತ್ತದ ಹಣವನ್ನು ವಿಧಾನಸೌಧಕ್ಕೆ ಏಕೆ ತೆಗೆದುಕೊಂಡು ಹೋಗುತ್ತಿದ್ದರು ಎಂಬುವುದು ಇನ್ನೂ ದೃಢಪಟ್ಟಿಲ್ಲ. ಹಣದ ಮೂಲದ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಇಷ್ಟು ದೊಡ್ಡ ಮೊತ್ತವನ್ನು ವಿಧಾನಸೌಧಕ್ಕೆ ತಂದಿದ್ದ ಉದ್ದೇಶ ಏನು? ಯಾರಿಗೆ ನೀಡಲು ಹಣವನ್ನು ತಂದಿದ್ದ ಎಂಬುವುದು ಸ್ಪಷ್ಟಗೊಂಡಿಲ್ಲ. ಈ ಬಗ್ಗೆ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಇನ್ನು ಈ ಘಟನೆ ಸಂಬಂಧ ಬೆಂಗಳೂರು ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಇಲಾಖೆಯ ಜೂನಿಯರ್ ಇಂಜಿನಿಯರ್ ಓರ್ವರು ಹಣದ ಸಹಿತ ಬಂದಿದ್ದಾರೆ. ಈ ವೇಳೆ ವಿಧಾನಸೌಧ ಮತ್ತು ವಿಕಾಸಸೌಧ ಭದ್ರತೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಣದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಸರಿಯಾದ ಉತ್ತರ ಇಲ್ಲ. ಬಳಿಕ ವಿಧಾನಸೌಧ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ದೂರು ಬಂದಿದೆ.
ದೂರಿನ ಅನ್ವಯ ಕೇಸ್ ದಾಖಲು ಮಾಡಲಾಗಿದೆ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ. ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯಕ್ಕೆ ಹಣವನ್ನು ಹಾಜರು ಪಡಿಸಲಿದ್ದೇವೆ. ಹಣ ತಂದಿದ್ದ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ. ಹಣದ ಮೂಲ, ಹಣ ಯಾಕೆ ತಂದಿದ್ದು. ಎಲ್ಲಿ ಡ್ರಾ ಮಾಡಲಾಗಿದೆ ಹಾಗು ಯಾರಿಗೆ ಕೊಡುವ ಉದ್ದೇಶ ಇದೆ ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.
ತಾನು ಮಂಡ್ಯದಲ್ಲಿ ಕೆಲಸ ಮಾಡ್ತಿದ್ದು ಇಲ್ಲಿ ವಿಕಾಸ ಸೌಧದಲ್ಲಿ ಕೆಲಸ ಇದ್ದ ಕಾರಣ ತಂದಿದ್ದೆ ನಾವು ಹಣವನ್ನು ಮಂಡ್ಯಕ್ಕೆ ತೆಗೆದುಕೊಂಡು ಹೋಗುವುದಿತ್ತು ಎಂದು ಜಗದೀಶ್ ತಿಳಿಸಿದ್ದಾರೆ. ಸದ್ಯ ಕೇಸ್ ದಾಖಲು ಮಾಡಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಶ್ರೀನಿವಾಸ ಗೌಡ ಮಾಹಿತಿ ನೀಡಿದ್ದಾರೆ.
ಮತ್ತೊಂದೆಡೆ ಈ ಘಟನೆ ಸಂಬಂಧ ಗೃಹ ಇಲಾಖೆ ಸಚಿವ ಆರಗ ಜ್ಞಾನೇಂದ್ರ ಮಾತನಾಡಿದ್ದು, ಯಾರಿಗೆ, ಯಾವ ಉದ್ದೇಶಕ್ಕೆ ಹಣ ತಂದಿದ್ದ ಎಂಬುದು ಗೊತ್ತಾಗಬೇಕು. ಹಣ ಪತ್ತೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತೆ.
ಆರೋಪಿಯನ್ನು ವಿಚಾರಣೆ ಮಾಡಿದ ಬಳಿಕವಷ್ಟೇ ಗೊತ್ತಾಗಬೇಕು. 40% ಏನೂ ಇಲ್ಲ, ಇದೆಲ್ಲಾ ಕಾಂಗ್ರೆಸ್ ಸರ್ಕಾರದಲ್ಲಿ ನಡೆದಿತ್ತು. ಚುನಾವಣೆ ಸಂದರ್ಭದಲ್ಲಿ ಸುಮ್ಮನೇ ಗಿಮಿಕ್ ಮಾಡುತ್ತಿದ್ದಾರೆ. ಈಗಾಗಲೇ ಒಬ್ಬ ಮಂತ್ರಿ ಮೇಲೆ ಕೇಸ್ ಹಾಕಿದ್ದಾರೆ, ತನಿಖೆ ಆಗ್ತಿದೆ ಎಂದರು.
2016ರಲ್ಲಿ ಇದೇ ರೀತಿ ಅನುಮಾನಸ್ಪದವಾಗಿ ಅಕ್ರಮವಾಗಿ 2.5 ಕೋಟಿ ರುಪಾಯಿ ನಗದನ್ನು ಸಾಗಿಸುತ್ತಿದ್ದ ಕಾರನ್ನು ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಪೊಲೀಸರು ಜಪ್ತಿ ಮಾಡಿದ್ದರು. ಆಗಿನ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಕಚೇರಿ ಸಿಬ್ಬಂದಿ ಬಳಿ 25.76 ಲಕ್ಷ ರೂ ನಗದು ಹಣ ಪತ್ತೆಯಾಗಿತ್ತು.