ಮಂಗಳೂರು/ನವದೆಹಲಿ : ಮೆಕ್ಸಿಕೋ, ಕೆನಡಾ ಮತ್ತು ಚೀನಾದ ಮೇಲೆ ಸುಂಕ ವಿಧಿಸುವ ಮೂಲಕ ಟ್ರಂಪ್ ಮೂರು ದೇಶಗಳ ವಿರೋಧ ಎದುರಿಸುತ್ತಿದ್ದರೆ, ಅಮೆರಿಕ ಅಧ್ಯಕ್ಷರ ಈ ಆದೇಶ ಭಾರತದ ಪಾಲಿಗೆ ವರದಾನವಾಗಲಿದೆ.

ಕೆನಡಾ ಮತ್ತು ಮೆಕ್ಸಿಕೊ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 25ರಷ್ಟು ಮತ್ತು ಚೀನಾದ ವಸ್ತುಗಳ ಮೇಲೆ ಶೇ.10ರಷ್ಟು ಸುಂಕವನ್ನು ಹೆಚ್ಚಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ. ಮಂಗಳವಾರದಿಂದಲೇ ಈ ಪರಿಷ್ಕೃತ ಸುಂಕವು ಆಯಾ ದೇಶಗಳ ಮೇಲೆ ಜಾರಿಯಾಗಲಿದೆ.
ವಿಶೇಷವಾಗಿ ಅಮೆರಿಕವು ಚೀನಾದ ಸರಕುಗಳ ಮೇಲೆ ಶೇಕಡಾ 10ರಷ್ಟು ಸುಂಕವನ್ನು ವಿಧಿಸಿದೆ. ಇದು ಭಾರತದ ಎಲೆಕ್ಟ್ರಾನಿಕ್ಸ್ ವಲಯಕ್ಕೆ ಪ್ರಯೋಜನಕಾರಿಯಾಗಲಿದೆ. ಭಾರತದಲ್ಲಿ ತಯಾರಾಗುವ ಆ್ಯಪಲ್ ಫೋನುಗಳು ಈಗಾಗಲೇ ಅಮೆರಿಕದಲ್ಲಿ ಮಾರಾಟವಾಗುತ್ತಿವೆ. ಈಗ ಚೀನಾದ ಮೇಲಿನ ಸುಂಕ ಹೆಚ್ಚಳದ ಕಾರಣದಿಂದ ಅಮೆರಿಕದ ಕಂಪನಿಗಳು ಭಾರತದಿಂದ ಹೆಚ್ಚಿನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ: ಪೊಲೀಸ್ ಜೀಪ್‌ನಲ್ಲಿ ಇಟ್ಟಿದ್ದ ವಾಕಿಟಾಕಿಗೆ ಕನ್ನ !
ಭಾರತ-ಅಮೆರಿಕ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅಗತ್ಯ
ಮೊಬೈಲ್ ಫೋನ್‌ಗಳಲ್ಲಿ ಬಳಸುವ ಪ್ರಮುಖ ಬಿಡಿ ಭಾಗಗಳಾದ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್‌ಗಳು, ಕ್ಯಾಮೆರಾ ಮಾಡ್ಯೂಲ್‌ಗಳು ಮತ್ತು ಯುಎಸ್‌ಬಿ ಕೇಬಲ್‌ಗಳ ಮೇಲಿನ ಸುಂಕವನ್ನು ಕೇಂದ್ರ ಸರ್ಕಾರ ಈ ವರ್ಷದ ಬಜೆಟ್‌ನಲ್ಲಿ ಕಡಿಮೆ ಮಾಡಿದೆ.
ಇದರಿಂದ ಇವುಗಳನ್ನು ಆಮದು ಮಾಡಿಕೊಳ್ಳುವ ಭಾರತೀಯ ಕಂಪನಿಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಸ್ಥಳೀಯ ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ವೇಗ ಪಡೆಯುವ ನಿರೀಕ್ಷೆಯಿದೆ. ಈ ಅವಕಾಶವನ್ನು ಬಳಸಿಕೊಳ್ಳಲು ಹೊಸ ನೀತಿಯನ್ನು ಪರಿಚಯಿಸಬೇಕು ಮತ್ತು ಭಾರತ-ಅಮೆರಿಕ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎನ್ನುತ್ತಾರೆ ಅರ್ಥಶಾಸ್ತ್ರಜ್ಞರು.
ಜಗತ್ತಿನ ಪ್ರಸಿದ್ದ ಬ್ರ್ಯಾಂಡ್‌ಗಳಿಗೆ ಭಾರತವೇ ಉತ್ಪಾದನಾ ಕೇಂದ್ರ
ಜಗತ್ತಿನ ಪ್ರಸಿದ್ದ ಬ್ರ್ಯಾಂಡ್‌ಗಳಾದ ಆ್ಯಪಲ್ ಮತ್ತು ಮೊಟೊರೊಲಾ ಭಾರತದಲ್ಲಿ ತಮ್ಮ ಉತ್ಪನ್ನಗಳನ್ನು ತಯಾರಿಸುತ್ತವೆ. ಇವು ಮುಂದಿನ ದಿನಗಳಲ್ಲಿ ಅಮೆರಿಕಕ್ಕೆ ರಫ್ತು ಹೆಚ್ಚಿಸುವ ಸಾಧ್ಯತೆಯಿದೆ. ಚೀನಿ ಉತ್ಪನ್ನಗಳ ಮೇಲೆ ಅಮೆರಿಕದ ಸುಂಕಗಳು ಭಾರತಕ್ಕೆ ಅಲ್ಪಾವಧಿಯಲ್ಲಿ ಸ್ವಲ್ಪ ಲಾಭದಾಯಕವಾಗಿದೆ. ಆದರೆ ಈ ಲಾಭವನ್ನು ದೀರ್ಘಾವಧಿಯವರೆಗೆ ವಿಸ್ತರಿಸಲು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದ ಮಾತ್ರ ಸಾಧ್ಯ.
ಐಫೋನ್ ತಯಾರಿಕೆ ಹೆಚ್ಚಳ
ಕಳೆದ ವರ್ಷ ಭಾರತದಿಂದ 1.75 ಲಕ್ಷ ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಆ್ಯಪಲ್ ಪಾಲು ಶೇ.65ರಷ್ಟಿದ್ದರೆ, ಸ್ಯಾಮ್‌ಸಂಗ್‌ನ ಪಾಲು ಶೇ. 20ರಷ್ಟಿದೆ. ಉಳಿದ ಕಂಪನಿಗಳ ಪಾಲು ಶೇ. 15ರಷ್ಟಿದೆ. ಕಳೆದ ವರ್ಷ ಆ್ಯಪಲ್ ಕಂಪೆನಿಯು ಭಾರತದಲ್ಲಿ 1.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಐಫೋನ್‌ಗಳನ್ನುತಯಾರಿಸಿತ್ತು. 1.10 ಲಕ್ಷ ಕೋಟಿ ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿತ್ತು. ಇನ್ನು ಸ್ಯಾಮ್‌ಸಂಗ್ 34,400 ಕೋಟಿ ರೂ. ಮೌಲ್ಯದ ಫೋನ್‌ಗಳನ್ನು ರಫ್ತು ಮಾಡಿದೆ.
ಆ್ಯಪಲ್ ತನ್ನ ಐಫೋನ್‌ಗಳಲ್ಲಿ ಶೇ. 25ರಷ್ಟು ಭಾರತದಲ್ಲಿ ಉತ್ಪಾದಿಸಲು ಯೋಜನೆ ರೂಪಿಸುತ್ತಿದೆ. ಇದನ್ನು ಮುಂದಿನ ಎರಡು ಮೂರು ವರ್ಷಗಳಲ್ಲಿ ಜಾರಿಗೆ ಬರುವಂತೆ ಆಲೋಚಿಸುತ್ತಿದೆ. ಈ ಮೂಲಕ ಆ್ಯಪಲ್, ಚೀನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ 40 ಭಾರತೀಯ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ಇವುಗಳಲ್ಲಿ ಡಿಕ್ಷನ್ ಟೆಕ್ನಾಲಜೀಸ್, ಆಂಬರ್ ಎಲೆಕ್ಟ್ರಾನಿಕ್ಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಮದರ್ ಸನ್ ಗ್ರೂಪ್ ಸೇರಿವೆ.
ಅಮೆರಿಕಕ್ಕೆ ಕಾದಿದ್ಯಾ ಸಂಕಷ್ಟ ?
ಕೆನಡಾ ಮೆಕ್ಸಿಕೊ ಮತ್ತು ಚೀನಾ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಅಮೆರಿಕವು ಆಮದು ಮಾಡಿಕೊಳ್ಳುತ್ತದೆ. ಈಗ ಈ ದೇಶಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಕೆನಡಾ ಈಗಾಗಲೇ ಅಮೆರಿಕದ ಮೇಲೆ ಆಮದು ಸುಂಕ ವಿಧಿಸಿದೆ. ಇದರಿಂದ ಅಮೆರಿಕಕ್ಕೆ ಹೆಚ್ಚಿನ ನಷ್ಟವಾಗಲಿದೆ. ಒಂದು ವೇಳೆ ಚೀನಾ ಹಾಗೂ ಮೆಕ್ಸಿಕೊ ದೇಶಗಳು ಕೂಡ ಕೆನಡಾ ದಾರಿಯನ್ನೇ ಹಿಡಿದರೆ ಅಮೆರಿಕಕ್ಕೆ ಸಂಕಷ್ಟ ಎದುರಾಗಲಿದೆ.