ಮಂಗಳೂರು/ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶುಕ್ರವಾರ (ಜ.17) ರಾತ್ರಿ ಕನ್ನಡ ಚಿತ್ರರಂಗದ ಖ್ಯಾತ ನಟಿ, ಮಾಜಿ ಸಚಿವೆ ಉಮಾಶ್ರೀಯವರು ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನದಲ್ಲಿ ಮಂಥರೆ ಪಾತ್ರದಲ್ಲಿ ಅಭಿನಯಿಸಿದರು.

ಯಕ್ಷಗಾನ ರಂಗದಲ್ಲಿ ಹಾಸ್ಯಗಾರರು ನಿರ್ವಹಿಸುವ ಪಾತ್ರಗಳಲ್ಲಿ ಒಂದು ಎಂದೇ ಪರಿಗಣಿಸಲ್ಪಟ್ಟ ಮಂಥರೆಯ ವೇಷದೊಂದಿಗೆ ಮೊದಲ ಬಾರಿಗೆ ಯಕ್ಷರಂಗದಲ್ಲಿ ಉಮಾಶ್ರೀಯವರು ಪಾತ್ರ ನಿರ್ವಹಿಸಿದರು.
ಹೊನ್ನಾವರದ ಸೇಂಟ್ ಅಂಥೋನಿ ಮೈದಾನದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ಯಕ್ಷಗಾನ ಮಂಡಳಿ ಆಯೋಜಿಸಿರುವ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ ನಡೆಯಿತು.
ಪೆರ್ಡೂರು ಮೇಳದ ಪ್ರಧಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ಯ ಜನ್ಸಾಲೆ ಅವರ ಪದ್ಯಕ್ಕೆ ಹೆಜ್ಜೆ ಹಾಕುತ್ತಾ ತನ್ನ ಅಭಿನಯದ ಚಾಕಚಕ್ಯತೆಯನ್ನು ತೋರುತ್ತಾ ರಂಗಸ್ಥಳವೇರಿದ ನಟಿಗೆ ಕೂತುಹಲಕಾರಿಯಾಗಿ ಕಾಯುತ್ತಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಕೈಕೇಯಿ ಪಾತ್ರದಲ್ಲಿ ಖ್ಯಾತ ಸ್ತ್ರೀ ಪಾತ್ರಧಾರಿ ಯಲಗುಪ್ಪ ಸುಬ್ರಮಣ್ಯ ಹೆಗಡೆ ಉಮಾಶ್ರೀಯವರೊಂದಿಗೆ ಸಂಭಾಷಣೆಯಲ್ಲಿ ಗಮನ ಸೆಳೆದರು.

ಇದನ್ನೂ ಓದಿ: ಧರ್ಮಸ್ಥಳ : ಉಚಿತ ಸಾಮೂಹಿಕ ವಿವಾಹಕ್ಕೆ ಅರ್ಜಿ ಆಹ್ವಾನ
ಮಂಥರೆ ಪಾತ್ರವನ್ನು ಉಮಾಶ್ರೀ ಅವರು ತುಂಬಾನೇ ಚೆನ್ನಾಗಿ ಮಾಡಿದ್ದಾರೆ. ರಂಗಭೂಮಿಯಲ್ಲಿ ತಮ್ಮದೇ ಛಾಪು ಮೂಡಿಸಿರೋ ಉಮಾಶ್ರೀ ಅವರು, ಈ ಒಂದು ಮಂಥರೆ ಪಾತ್ರದ ಮೂಲಕವೇ ಹೊನ್ನಾವರದ ಜನರ ಹೃದಯ ಗೆದ್ದಿದ್ದಾರೆ ಅಂತಲೂ ಹೇಳಬಹುದು.
ಉಮಾಶ್ರೀ ಮಂಥರೆ ಪಾತ್ರ ಮಾಡಲು ಕಾರಣ ಏನು?
ಉಮಾಶ್ರೀ ಅವರಿಗೆ ಮಂಥರೆ ಪಾತ್ರ ಹೊಸದೇ ಆಗಿದೆ. ಇಲ್ಲಿವರೆಗೂ ಈ ರೀತಿಯ ಪಾತ್ರ ಮಾಡಿದ್ದೇ ಇಲ್ಲ. ಆದರೆ, ಈ ಒಂದು ಪಾತ್ರ ಮಾಡೋಕೆ ಕಾರಣವೂ ಇದೆ. ಆ ಕಾರಣದ ಹೆಸರು ರಾಮಚಂದ್ರ ಚಿಟ್ಟಾಣಿ ಅಂತಲೇ ಹೇಳಬೇಕಾಗುತ್ತದೆ.
ಯಕ್ಷಗಾನದಲ್ಲಿ ದಿಗ್ಗಜ ಕಲಾವಿದರ ಸಾಲಿನಲ್ಲಿ ರಾಮಚಂದ್ರ ಚಿಟ್ಟಾಣಿಯವರೂ ಒಬ್ಬರು. ದಿವಂಗತ ರಾಮಚಂದ್ರ ಚಿಟ್ಟಾಣಿಯವರಿಗೆ ಉಮಾಶ್ರೀ ಯಕ್ಷಗಾನದಲ್ಲಿ ಪಾತ್ರ ಮಾಡಬೇಕೆಂದಿತ್ತಂತೆ. ಮಂಥರೆ ಪಾತ್ರ ಮಾಡುವಂತೆ ಕೇಳಿದಾಗ ಉಮಾಶ್ರೀ ನನಗೆ ಯಕ್ಷಗಾನದಲ್ಲಿ ಅನುಭವವಿಲ್ಲ. ಹೀಗಾಗಿ ಹೇಗೆ ಮಾಡಲಿ ಎಂದು ಹಿಂದೇಟು ಹಾಕಿದ್ದರಂತೆ.
ಇತ್ತೀಚೆಗೆ ಅವರ ಮಗ ಸುಬ್ರಹ್ಮಣ್ಯ ಚಿಟ್ಟಾಣಿಯವರು ಮಂಥರೆಯ ಪಾತ್ರ ಮಾಡಲು ಕೋರಿಕೊಂಡಾಗ ರಾಮಚಂದ್ರ ಚಿಟ್ಟಾಣಿಯವರ ಮೇಲಿನ ಗೌರವದಿಂದ ಪಾತ್ರ ಮಾಡಲು ಒಪ್ಪಿಕೊಂಡರಂತೆ. ಈ ಮೂಲಕ ಅವರ ಆತ್ಮಕ್ಕೆ ತೃಪ್ತಿ ಸಿಗಲಿ ಎಂದು ಪಾತ್ರ ಮಾಡಲು ಒಪ್ಪಿಕೊಂಡೆ ಎಂದಿದ್ದಾರೆ.
ನಿನ್ನೆ ರಾತ್ರಿ ನಡೆದ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯ ಪಾತ್ರದಲ್ಲಿ ಮಿಂಚಿದ ಉಮಾಶ್ರೀ ತಮ್ಮೊಳಗಿನ ಮತ್ತೊಂದು ಪ್ರತಿಭೆಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.