ಸುಳ್ಯ: ಮಹಿಳೆಯೊಬ್ಬರು ಅಪರೂಪದ ಕಾಯಿಲೆಗೆ ತುತ್ತಾಗಿ ತಮ್ಮ 34ರ ಹರೆಯದಲ್ಲೇ ಇದೀಗ 13ನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ.ಚಾಂದಿನೆ ಎಮಬ ಹೆಸರಿನ ಮಹಿಳೆಗೆ ಆಸ್ಪತ್ರೆಯೇ ಬದುಕಾಗಿಬಿಟ್ಟಿದೆ. ಶಸ್ತ್ರ ಚಿಕಿತ್ಸೆ ಮಾತ್ರವಲ್ಲದೆ ಈಗಾಗಲೇ ಕೃತಕ ಉಸಿರಾಟ, ಶಾಕ್ ಟ್ರೀಟ್ಮೆಂಟ್, ಕಿಮೋಥೆರಪಿ ಸೇರಿದಂತೆ ಕಳೆದ 31 ವರ್ಷಗಳಲ್ಲಿ ತಮ್ಮ ಜೀವನವನ್ನು ಬಹುತೇಕವಾಗಿ ಆಸ್ಪತ್ರೆಯಲ್ಲೇ ಕಳೆದಿರುವ ಮಹಿಳೆಯ ಬದುಕು ನಿಜಕ್ಕೂ ಮೈ ನಡುಗಿಸುವಂತದ್ದು.

ಬದುಕಲ್ಲಿ ಏನಿಲ್ಲದಿದ್ದರೂ ಪರವಾಗಿಲ್ಲ ಆದರೆ ಆರೋಗ್ಯವೊಂದು ಸರಿ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಇದರಿಂದಲೇ ಕನ್ನಡದಲ್ಲಿ ‘ಆರೋಗ್ಯವೇ ಭಾಗ್ಯ’ ಎಂಬ ಗಾದೆಯೂ ಇದೆ. ಅನೇಕರು ತಮ್ಮ ಜೀವನದಲ್ಲಿ ಆಸ್ಪತ್ರೆಯ ಮೆಟ್ಟಿಲನ್ನೇ ಹತ್ತಿರುವುದಿಲ್ಲ. ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಂಡು, ಗಟ್ಟಿ ಮುಟ್ಟಾಗಿ ಇರುತ್ತಾರೆ. ಇನ್ನು ಕೆಲವರು ಆಗಾಗ ಕಾಯಿಲೆ, ರೋಗಗಳನ್ನು ತಂದಳೆದುಕೊಂಡು ಸದಾ ಆಸ್ಪತ್ರೆಯತ್ತ ಮುಖ ಮಾಡಿರುತ್ತಾರೆ. ಆದರೆ, ಇಲ್ಲೊಬ್ಬಳು ಮಹಿಳೆಗೆ ಆಸ್ಪತ್ರೆಯೇ ಬದುಕಾಗಿದೆ. ಈಕೆಯ ಕರುಣಾಜನಕ ಕಥೆ ಕೇಳಿದ್ರೆ ಖಂಡಿತ ಕಣ್ಣಂಚಲ್ಲಿ ನೀರು ಬರುತ್ತದೆ.
ಚಾಂದಿನಿಗೆ ಇರುವ ಖಾಯಿಲೆ ಏನು ?
ಸುಳ್ಯದ ನಾವೂರಿನ ದಿ. ಧನಂಜಯ ಮತ್ತು ಸರೋಜನಿ ದಂಪತಿ ಪುತ್ರಿ ಚಾಂದಿನಿಗೆ ತನ್ನ 3ರ ಹರೆಯದಲ್ಲೇ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿತ್ತು. ತನ್ನ ದೇಹವನ್ನು ಆವರಿಸಿಕೊಂಡ ಕಾಯಿಲೆಯ ಅರಿವೇ ಇಲ್ಲದ ಚಾಂದಿನಿ 7ನೆ ತರಗತಿ ವರೆಗೂ ಸುಳ್ಯದ ಸೈಂಟ್ ಬ್ರಿಜಿಡ್ಸ್ ಶಾಲೆಯಲ್ಲಿ ಕಲಿತರಾದರೂ ಬಳಿಕ ಸಾಂಪ್ರದಾಯಿಕ ಶಾಲಾ, ಕಾಲೇಜು ಶಿಕ್ಷಣದಿಂದ ವಂಚಿತರಾದರು. ತಿಂಗಳಲ್ಲಿ 10 ದಿನ ಮನೆಯಲ್ಲಿದ್ದರೆ, ಉಳಿದ 20 ದಿನ ಆಸ್ಪತ್ರೆಯಲ್ಲಿ ಇರಬೇಕಾಗಿದ್ದ ಚಾಂದಿನಿಗೆ ತಾಯಿಯೇ ಶಿಕ್ಷಕಿಯಾದರು.
ಬಡತನದ ನಡುವೆಯೂ ತನ್ನ ಮಗಳ ಚಿಕಿತ್ಸೆಗಾಗಿ ತಂದೆ ತನ್ನ ದುಡಿಮೆಯ ಹಣವನ್ನೆಲ್ಲಾ ವಿನಿಯೋಗಿಸಿದರು. ಈ ರೀತಿ 19 ವರ್ಷಗಳ ಕಾಲ ಯಾರೊಬ್ಬರಲ್ಲೂ ಕೈಚಾಚದೆ ಚಾಂದಿನಿ ತಂದೆ ಮಗಳಿಗೆ ಚಿಕಿತ್ಸೆ ಕೊಡಿಸಿದ್ದರು. ಈ ನಡುವೆ ಸ್ಟಿರಾಯಿಡ್ ಸೇವನೆಯ ಪರಿಣಾಮ ಚಾಂದಿನಿ ಕಣ್ಣಿನ ದೃಷ್ಟಿ ಹೀನಗೊಂಡವು. ಈ ಸಂದರ್ಭ ಪೋಷಕರೇ ಮಗಳ ಕಣ್ಣಾಗಿ ಕಾಪಾಡಿದರು. ಅನಾರೋಗ್ಯದ ನಡುವೆಯೂ ಚಾಂದಿನಿಯವರ ಕಲಿಕೆಯ ಆಸಕ್ತಿ ಕಡಿಮೆಯಾಗಿರಲಿಲ್ಲ. ಹಾಗಾಗಿ 7ನೆ ತರಗತಿ ಪರೀಕ್ಷೆಯನ್ನು ಶಿಕ್ಷಕರ ಸಹಕಾರದೊಂದಿಗೆ ಖಾಸಗಿಯಾಗಿ ಬರೆದು ಉತ್ತೀರ್ಣರಾದರು.
10ನೆ ತರಗತಿ ಪರೀಕ್ಷೆ ವೇಳೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಚಾಂದಿನಿಗೆ ವಿಶೇಷ ಮುತುವರ್ಜಿ ಮೇರೆಗೆ ಆಂಬುಲೆನ್ಸ್‌ನಲ್ಲಿ ತೆರಳಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಯಿತು. 10ನೆ ತರಗತಿ ಪಾಸ್ ಆದ ಚಾಂದಿನಿ ತಮ್ಮ ಅನಾರೋಗ್ಯದ ಜತೆಯಲ್ಲೇ ಖಾಸಗಿ ಉದ್ಯೋಗವೊಂದಕ್ಕೆ ಸೇರಿ ಪಿಯುಸಿ ಪರೀಕ್ಷೆ ಬರೆದರು. ಈ ನಡುವೆ ಚಾಂದಿನಿಯ ಅನಾರೋಗ್ಯದ ಅರಿವಿದ್ದರೂ ಕಾಸರಗೋಡಿನ ಬಂದಡ್ಕದ ಪುರುಷೋತ್ತಮ ಅವರು 2013ರಲ್ಲಿ ಚಾಂದಿನಿ ಅವರ ಕೈ ಹಿಡಿದರು. ಪತಿಯ ಪ್ರೀತಿ, ಆರೈಕೆಯ ಜತೆಯಲ್ಲಿ ಪದವಿ ಪರೀಕ್ಷೆಯನ್ನೂ ಖಾಸಗಿಯಾಗಿ ಚಾಂದಿನಿ ಮುಗಿಸಿದ್ದು, ಪಂಜದ ಮೊರಾರ್ಜಿ ದೇಸಾಯಿ ವಿದ್ಯಾಸಂಸ್ಥೆಯಲ್ಲಿ ವೃತ್ತಿ ನಿರ್ವಹಿಸುತ್ತಿದ್ದಾರೆ. 6 ವರ್ಷದ ಪುಟ್ಟ ಕಂದಮ್ಮನ ತಾಯಿಯಾಗಿಯೂ ತನ್ನ ಕರ್ತವ್ಯ ನಿರ್ವಹಿಸುತ್ತಿರುವ ಚಾಂದಿನಿಯವರ ಆಸ್ಪತ್ರೆ ಬದುಕು ಮಾತ್ರ ಮುಂದುವರಿದಿದೆ.
ಇಷ್ಟೇ ಅಲ್ಲದೆ ಹೈಪರ್ ಐಜಿಇ ಮೆಡಿಕೇಟೆಟ್ ಮಸ್ಟ್ ಸೆಲ್ ಆಕ್ಟಿವೇಶನ್ ಸಿಸ್ಟಮ್ (Hyper IGE Medicated Mast cell activation syndrome) ಎಂಬ ಕಾಯಿಲೆಯಿಂದ ಬಳಲುತ್ತಿರುವ ಚಾಂದಿನಿ ಹೃದಯದ ಬಲಭಾಗದಲ್ಲಿ ಟ್ಯೂಮರ್ ಆಗಿರುವುದು ಇತ್ತೀಚೆಗೆ ಪತ್ತೆಯಾಗಿದೆ. ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಇದಕ್ಕಾಗಿ ಶಸ್ತ್ರ ಚಿಕಿತ್ಸೆಗೆ ತೆರಳುವಂತೆ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರು ಸೂಚನೆ ನೀಡಿದ್ದಾರೆ.
ಇದು ಸುಳ್ಯದ ಚಾಂದಿನಿ ಪುರುಷೋತ್ತಮ ಅವರ ಬದುಕಿನ ಕಥೆ. ಚಾಂದಿನಿ ಅವರಿಗೆ ಸುಮಾರು ಮೂರು ವರ್ಷ ಪ್ರಾಯವಿದ್ದಾಗ ಆರೋಗ್ಯದ ಸಮಸ್ಯೆ ಕಂಡುಬಂದಿತ್ತು. ಅಂದಿನಿಂದ ಆಸ್ಪತ್ರೆ ಮೆಟ್ಟಿಲು ಹತ್ತುತ್ತಲೇ ಬದುಕು ಸಾಗಿಸಿದ ಚಾಂದಿನಿಗೆ “ಬದುಕಿನಲ್ಲಿ ನಾಳೆ ಇದೆ” ಎನ್ನುವ ಭರವಸೆ, ವಿಶ್ವಾಸದಿಂದ ಇಂದು ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಆರೋಗ್ಯಕ್ಕಾಗಿ ಸುಮಾರು 70 ಲಕ್ಷ ಖರ್ಚು ಮಾಡಿದ್ದಾರೆ. ಹಲವು ಬಾರಿ ಆಪರೇಷನ್ ಆಗಿದೆ. ಕೃತಕ ಉಸಿರಾಟ, ವಿದ್ಯುತ್ ಟ್ರೀಟ್‌ಮೆಂಟ್ ಹೀಗೆ ಹಲವು ಚಿಕಿತ್ಸೆಗಳು ನಡೆದಿದೆ. ಇತ್ತೀಚೆಗೆ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಅಲ್ಲಿನ ಬಿಲ್ ಮೊತ್ತ ಪಾವತಿಸಲು ಸಾಧ್ಯವಾಗದೆ ದಯಾ ಮರಣ ಪಾಲಿಸುವಂತೆ ಚಾಂದಿನಿಯವರು ಸರಕಾರಕ್ಕೆ ಪತ್ರ ಬರೆದಿದ್ದರು. ಚಾಂದಿನಿಗೆ, ಅವರ ಚಿಕಿತ್ಸೆಗೆ ಈಗಾಗಲೇ ಸಾಕಷ್ಟು ಸಹೃದಯಿಗಳು ಸಹಕರಿಸಿದ್ದಾರೆ. ಮುಂದೆಯೂ ಸಹಕಾರದ ಅಗತ್ಯವಿದೆ. ನೆರವು ನೀಡಲು ಇಚ್ಚಿಸುವ ಸಹೃದಯಿಗಳು ಸಹಾಯ ಮಾಡಬಹುದು ಎಂಬ ನಿರೀಕ್ಷೆಯಲ್ಲಿ ಕುಟುಂಬವಿದೆ.