ಫೋಟೋ ತೆಗೆದು ಮರ್ಯಾದೆ ತೆಗೆಯುವುದಕ್ಕಿಂತ ಅವರು ಹಸಿವೆಯಲ್ಲೇ ಒದ್ದಾಡಲಿ ಬಿಡಿ.!
ಮಹಾಮಾರಿ ಕೊರೊನಾ ಬಂದ ಮೇಲಂತೂ ಜನಜೀವನ ಚೆಲ್ಲಾಪಿಲ್ಲಿಯಾಗಿದೆ. ಬಡವರಿಗೆ, ಕೂಲಿ ಕಾರ್ಮಿಕರಿಗೆ ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಕಾಲ.

ಇಂತಹ ಸಮಯದಲ್ಲಿ ಕೆಲವರು ಸಹಾಯಹಸ್ತ ಚಾಚುವ ನೆಪದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ತಮ್ಮ-ತಮ್ಮ ಪ್ರಚಾರದ ಗೀಳಿಗೆ ಬಡಪಾಯಿಗಳನ್ನು ಬಲಿಯಾಗಿಸುತ್ತಿದ್ದಾರೆ.
ಕೊಡೋದು ಜುಜಿಬಿ ಒಂದು ಕೆ.ಜಿ ಅಕ್ಕಿಯಾದರೂ ಹಂಚೋದು ಮಾತ್ರ ನೂರಾರು ವಾಟ್ಸಾಪ್ ಫೇಸ್ ಬುಕ್ ಗ್ರೂಪುಗಳಿಗೆ.

ಹಸಿವೆಯಿಂದ ಚುರುಗುಟ್ಟುತ್ತಿದ್ದ ಹೊಟ್ಟೆ ಹೊತ್ತುಕೊಂಡು ವಿಲವಿಲನೆ ಒದ್ದಾಡುತ್ತಿದ್ದ ಆ ಮನಸ್ಸು ಒಂದು ದಿನ ತಿಂದುಡು ಮಲಗಿ ಎದ್ದಾಗ ಬೆಳಗಾಗೊದ್ರೊಳಗೆ ಪಕ್ಕದ ಮನೆಯವರು ನಿಮಗೆ ಯಾರೋ ಅಕ್ಕಿ-ಬೇಳೆ-ಕಾಳು ನೀಡಿದ್ದಾರಲ್ವಾ.?.
ವಾಟ್ಸಾಪ್ ನಲ್ಲಿ ಪೋಟೋ ನೋಡಿದೆ ಅಂತ ಅಂದಾಗ, ಮೊದಲೇ ನೊಂದ ಆ ಮನಸ್ಸುಗಳಿಗೆ ಮತ್ತೆಷ್ಟು ಘಾಸಿಯಾಗಬೇಡ.
ಅವರ್ಯಾರೋ ಕೊಟ್ಟು ಹೋದ ಸಾಮಾಗ್ರಿ ಒಂದು ದಿನಕ್ಕೋ ಒಂದು ವಾರಕ್ಕೋ ಖಾಲಿಯಾಗಬಹುದು. ಆದ್ರೆ ಸುತ್ತಮುತ್ತಲಿನವರ ಗೇಲಿಮಾತು, ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರ ಅದೆಷ್ಟೋ ದಿನ ಚುಚ್ಚುತ್ತಿರುತ್ತೇ ಅಲ್ವಾ.?.

ಹೌದು.. ಕೊರೊನಾ ವೈರಸ್ ಎಂಬ ಮಹಾಮಾರಿ ದಿನ ಕಳೆಯುತ್ತಿದ್ದಂತೆ ಭೀಕರ ರೂಪ ಪಡೆಯುತ್ತಿದೆ.
ಬದುಕಿ ಉಳಿದರೆ ನಾಳೆ ಏನಾದರೂ ಮಾಡಬಹುದು. ಆದರೆ, ದೇಶದ ಆರ್ಥಿಕತೆಗಾಗಿ ಭಾರತೀಯರನ್ನು ಬಲಿ ಕೊಡಲಾರೆ ಎಂದು ಖುದ್ದು ಪ್ರಧಾನಿಯೇ ಕಠಿಣ ನಿರ್ಧಾರ ತೆಗೆದುಕೊಂಡು ಇಡೀ ದೇಶಕ್ಕೆ ಲಾಕ್ ಹಾಕಿ ಬಿಟ್ಟರು.
ಇದು ಕೆಲವರಿಗೆ ಮಜಾ ಮಾಡುವ ಸಮಯವಾದ್ರೆ, ಇನ್ನು ಕೆಲವರಿಗೆ ಈ ದಿನಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವಂತೆ ಮಾಡಿತ್ತು. ಕೆಲಸವಿಲ್ಲ, ಹಣವಿಲ್ಲ ಜೊತೆಯಿದ್ದಿದ್ದು ಕೇವಲ ಕಣ್ಣೀರು ಮಾತ್ರ….
ಕಷ್ಟಪಟ್ಟು ಕೂಲಿನಾಲಿ ಮಾಡಿಕೊಂಡು ಹೊಟ್ಟೆ ಹೊರೆಯುತ್ತಿದ್ದ ಬಡಜೀವಗಳು ಸ್ವಾಭಿಮಾನಿಗಳೇ ಅಲ್ವಾ. ಭಿಕ್ಷಂದೇಹಿ ಅಂತ ಮನೆ ಮನೆ ಸುತ್ತಾಡಲು ಸಾಧ್ಯವಿಲ್ಲ ಅಲ್ಲವೇ.
ಯಾಕೆಂದರೆ ಅವರೆಲ್ಲಾ ಭಿಕ್ಷುಕರಲ್ಲ ಸ್ವಾಭಿಮಾನಿಗಳು. ಆದ್ರೆ ಈಗಿನ ಪರಿಸ್ಥಿತಿ ಒಪ್ಪೊತ್ತಿನ ಊಟಕ್ಕೆ ಸಂಕಟ ಪಡುವಂತೆ ಮಾಡಿದೆ.
ದೇವರು ನೀಡಿದ ಕೈಕಾಲುಗಳು ಬಲಿಷ್ಠವಾಗಿ ದುಡಿಯಲು ಸಮರ್ಥವಾಗಿದ್ರೂ ಭಾರತ ಲಾಕ್ ಡೌನ್ ಆಗಿ ಕೆಲಸವಿಲ್ಲ, ಇದೇ ಒಂದು ಕಾರಣ ಈ ಎಲ್ಲಾ ಅವಾಂತರಕ್ಕೆ ಕಾರಣ.
ಇವರೆಲ್ಲರ ಕಷ್ಟಗಳನ್ನು ಕಂಡು ಕೆಲವೊಂದಿಷ್ಟು ಮಂದಿ ನಿಸ್ವಾರ್ಥಿಗಳಾಗಿ ಯಾವ ಪ್ರಚಾರವನ್ನೂ ಬಯಸದೆ ದಾನ ಮಾಡಲು ಆರಂಭಿಸಿದ್ರೆ,
ಇದನ್ನು ಗಮನಿಸಿದ ಕೆಲವೊಂದಿಷ್ಟು ಶೋಕಿವಾಲಗಳು ತಾವೇನು ಕಮ್ಮಿಯಿಲ್ಲ ಎಂದು ತೋರಿಸಿಕೊಳ್ಳಲು ದಾನದ ಹೆಸರಿನಲ್ಲಿ ಪ್ರಚಾರ ಬಯಸಿದರು.
ನೀಡಿದ ಒಂದು ಕೆ.ಜಿ.ಅಕ್ಕಿಗೆ ಹತ್ತು ಫೊಟೋ ಕ್ಲಿಕ್ಕಿಸಿಕೊಂಡರು. ಆ ಅಕ್ಕಿಯನ್ನು ಪಡೆದು ತಿಂದುಂಡು ಮಲಗಿತು ಕುಟುಂಬ.
ಆ ಫೊಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆಗುತ್ತಿರುವಾಗ ಪಡೆದುಕೊಂಡ ಕುಟುಂಬ ಮತ್ತೆ ಹಸಿವಲ್ಲಿ ಒದ್ದಾಡುತ್ತಿತ್ತು.
ಇನ್ನು ಈ ಬಗ್ಗೆ ಟಿಕ್ ಟಾಕ್ ಕೂಡ ಬಂದಿದೆ. ಮನೆಯಲ್ಲಿ ತಿನ್ನಲೂ ಏನೂ ಉಳಿದಿಲ್ಲವಾದರೂ ಅವರ ಪ್ರಚಾರದ ಗೀಳಿಗೆ ಸಿಕ್ಕಿ ಬಲಿಯಾಗದಿರುವುದೇ ಉತ್ತಮ.
ಅಷ್ಟೇ ಅಲ್ಲದೇ ಕಿಟ್ ನೀಡುವಾಗ ಫೋಟೋ ತೆಗೆಯುವುದನ್ನು ಈಗಾಗಲೇ ರಾಜಸ್ಥಾನ ಬ್ಯಾನ್ ಮಾಡಿದೆ. ಅದು ನಮ್ಮ ರಾಜ್ಯದಲ್ಲೂ ಜಾರಿಯಾಗಬೇಕಿದೆ.
ಇತ್ತೀಚೆಗೆ ಪ್ರಾಯಕ್ಕೆ ಬಂದ ಹೆಣ್ಣುಮಗಳನ್ನು ನಿಲ್ಲಿಸಿ ತೆಗೆದ ಫೊಟೋ ಭಾರೀ ವೈರಲ್ ಆಗಿತ್ತು.
ಅದರ ಜೊತೆಗೆ ಆಕೆಯ ಮಾನ ಮರ್ಯಾದೆಯೂ ಹರಾಜಾಗಿತ್ತು. ಹಾಗಾಗಿ ಸಹಾಯ ಹಸ್ತ ಚಾಚುವ ನಿಮ್ಮೆಲ್ಲರಿಗೆ ಹೇಳುವುದೇನೆಂದರೆ, ‘ನೀವು ತೆಗೆದ ಆ ಒಂದು ಫೊಟೋ ಇಡೀ ಕುಟುಂಬದ ಸಾವಿಗೆ ಕಾರಣವಾಗಬಹುದು’.
‘ಮಾನ ಮರ್ಯಾದೆ ತೆಗೆದು ನೀವುಗಳೇ ಈ ರೀತಿ ಕೊಲೆ ಮಾಡುವುದಕ್ಕಿಂತ, ಅವರು ಹಸಿವೆಯಲ್ಲೇ ಒದ್ದಾಡಿ ಸ್ವಾಭಿಮಾನಿಗಳಾಗಿಯೇ ಸಾಯಲಿ ಬಿಡಿ…