ಕೊರೊನಾ ಜಾಗೃತಿಯ ಕನ್ನಡ ಕಾಲರ್ ಟ್ಯೂನ್ ಧ್ವನಿ ಯಾರದು ಅಂತೀರಾ.?.. ಇವರದೇ ನೋಡಿ..
ಪುತ್ತೂರು: ಕೊರೊನಾ ಅನ್ನೋ ಮಹಾಮಾರಿ ನಮ್ಮಲ್ಲೂ ವಕ್ಕರಿಸಿದ ಮೇಲೆ, ಕೊರೊನಾಗಿಂತ ಜಾಸ್ತಿ ಕಾಡಿದ್ದು ಕಾಲ್ ಮಾಡಬೇಕು ಅಂತ ಮೊಬೈಲ್ ಎತ್ತಿಕೊಂಡು ಡಯಲ್ ಮಾಡಿದಾಗ ಅದರಲ್ಲಿ ಬರುತ್ತಿದ್ದ ಕೊರೊನಾ ಜಾಗೃತಿ ಕಾಲರ್ ಟ್ಯೂನ್.

ಈ ಕಾಲರ್ ಟ್ಯೂನ್ ಗೆ ಸಾಕಷ್ಟು ಜನ ಕೆಂಡಾಮಂಡಲವಾಗಿದ್ರು. ಅಲ್ಲದೇ ಸಾಕಷ್ಟು ಟ್ರೋಲ್ ಗಳು ಕೂಡ ಈ ಕಾಲರ್ ಟ್ಯೂನ್ ಗಳ ಮೇಲಾಗಿತ್ತು.
ಅಷ್ಟಕ್ಕೂ ಆ ಜಾಗೃತಿ ಕಾಲರ್ ಟ್ಯೂನ್ ನಲ್ಲಿ ಕನ್ನಡದಲ್ಲಿ ಬರ್ತಾ ಇದ್ದ ಧ್ವನಿ ಯಾರದಿರಬಹುದು ಅನ್ನೋ ಕುತೂಹಲ ಹಲವರಿಗಿದ್ದಿರಬಹುದು.
ಆ ಕುತೂಹಲಕ್ಕೆ ಉತ್ತರ ಇಲ್ಲಿದೆ ನೋಡಿ..
ಎಸ್.. ಇತ್ತೀಚಿನ ದಿನಗಳಲ್ಲಿ ವಿಶ್ವದಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಮ್ಮವರ ಧ್ವನಿ ಕಾಲರ್ ಟ್ಯೂನ್ ನ ಮೂಲಕ ಕೋಟ್ಯಂತರ ಜನರ ಕಿವಿಗೆ ತಲುಪುತ್ತಿದೆ.
ಈ ಕನ್ನಡ ಭಾಷೆಯ ಕಾಲರ್ ಟ್ಯೂನ್ ಗೆ ಧ್ವನಿ ಕೊಟ್ಟ ಬಹುಮುಖ ಪ್ರತಿಭೆ ಡಾರೆಲ್ ಜೆಸಿಕಾ ಫೆರ್ನಾಂಡಿಸ್.
ಪ್ರಸ್ತುತ ದೆಹಲಿಯ ಕನ್ನಡ ಸೀನಿಯರ್ ಸೆಕೆಂಡರಿ ಸ್ಕೂಲ್ ನಲ್ಲಿ ಕಳೆದ 7 ವರ್ಷಗಳಿಂದ ದೈಹಿಕ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು,
ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಗಳೂರಿನ ಕಪಿತಾನಿಯೊದಲ್ಲಿ ಪಡೆದು ಪದವಿ ಶಿಕ್ಷಣವನ್ನು ಮಂಗಳೂರಿನ ಅಲೋಶಿಯಸ್ ಕಾಲೇಜಿನಲ್ಲಿ ಪಡೆದಿರುತ್ತಾರೆ.
ಈ ಮಂಗಳೂರಿನ ಹುಡುಗಿಗೆ ಪುತ್ತೂರಿನ ನಂಟೂ ಇದೆ. ಇವರು ಪುತ್ತೂರಿನ ಪ್ರತಿಷ್ಠಿತ ಸಂತ ಫಿಲೋಮಿನಾ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಇವರ ತಂಗಿಯೂ ಹೌದು.
ಜೆಸಿಕಾರವರಿಗೆ ಕೊರೋನಾ ಜಾಗೃತಿಯ ಕಾಲರ್ ಟ್ಯೂನ್ ಗೆ ಧ್ವನಿ ಕೊಡಲು ಪ್ರೇರೇಪಿಸಿದವರು ಖ್ಯಾತ ಯಕ್ಷಗಾನ ಕಲಾವಿದರಾದ ಸರವು ಕೃಷ್ಣ ಭಟ್.
ಇವರು ಜೆಸಿಕಾ ಕೆಲಸ ಮಾಡುತ್ತಿರುವ ಶಾಲೆಯ ಅಧ್ಯಕ್ಷರು ಕೂಡ ಹೌದು.
“ನಾನು ಸರವು ಕೃಷ್ಣ ಭಟ್ ಅವರು ಹೇಳಿದ್ರು ಅಂತ ಧ್ವನಿ ನೀಡಲು ಹೋಗಿದ್ದೆ. ಅವರು ಬಿಟ್ಟು ಬೇರೆ ಯಾರು ಹೇಳಿದ್ರೂ ನಾನು ಧ್ವನಿ ನೀಡಲು ಹೋಗುವ ಸಾಹಸ ಮಾಡೋದಿಲ್ಲ” ಎಂದು ನಗುತ್ತಾರೆ ಜೆಸಿಕಾ.
ಡಾರೆಲ್ ಜೆಸಿಕಾ ಇದುವರೆಗೆ 200 ಕ್ಕೂ ಹೆಚ್ಚು ಸರಕಾರದ ಯೋಜನೆಗಳಿಗೆ ಧ್ವನಿ ನೀಡಿದ್ದಾರೆ.
ತಮ್ಮ 24ನೇ ವಯಸ್ಸಿನಲ್ಲಿ ಧ್ವನಿ ನೀಡಲು ಆರಂಭಿಸಿದ ಇವರ ಧ್ವನಿ ಇಂದಿಗೂ ರೇಡಿಯೋ, ದೂರದರ್ಶನ ಗಳಲ್ಲಿ ಪ್ರಸಾರವಾಗುತ್ತಿದೆ.
ಇವರು ಕಳೆದ 7 ವರ್ಷಗಳಿಂದ ಅನೇಕ ಜಾಹಿರಾತುಗಳಿಗೆ ಹಾಗೂ ಪ್ರಕಟಣೆಗಳಿಗೆ ಧ್ವನಿ ನೀಡಿದ್ದಾರೆ.

“ಪ್ರತಿಯೊಬ್ಬರ ಫೋನ್ ನಲ್ಲಿ ತನ್ನ ಧ್ವನಿ ಪ್ರಸಾರವಾಗಬಹುದು ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ.
ಕನ್ನಡದಲ್ಲಿ ಕೋಟ್ಯಾಂತರ ಜನರಿಗೆ ಕೇಳಿಸುವ ಜಾಗೃತಿಯ ಧ್ವನಿ ನನ್ನದು ಎಂದು ಹೇಳಲು ಹೆಮ್ಮೆ ಅನಿಸುತ್ತದೆ” ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ ಜೆಸಿಕಾ.
ಚಿಕ್ಕ ವಯಸ್ಸಿನಲ್ಲಿ ಸೇನೆಗೆ ಸೇರುವ ಕನಸು ಹೊತ್ತುಕೊಂಡಿದ್ದ ಇವರು ತಮ್ಮ ಕಾಲೇಜು ದಿನಗಳಲ್ಲಿ NCC ಕೆಡೆಟ್ ಆಗಿ,
ಸಂತ ಅಲೋಶಿಯಸ್ ಕಾಲೇಜಿನ 2006-07 ನೇ ಸಾಲಿನ “ಬೆಸ್ಟ್ NCC ಕೆಡೆಟ್ “ಎಂಬ ಹೆಸರಿಗೆ ಭಾಜನರಾಗಿದ್ದಾರೆ.
NCC ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ಭಾಗವಹಿಸಿ ಚಿನ್ನದ ಪದಕ ಹಾಗೂ ಪರೇಡ್ ಟ್ಯಾಲೆಂಟ್ ನಲ್ಲಿ ಬೆಳ್ಳಿಯ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು, ಖೋ ಖೋ, ಕಬಡ್ಡಿ, ತ್ರೋಬಾಲ್, ಟೆನ್ನಿಸ್, ಫುಟ್ಬಾಲ್, ಹ್ಯಾಂಡ್ಬಾಲ್, ಅಥ್ಲೆಟಿಕ್ಸ್ ಮುಂತಾದ ಕ್ರೀಡೆಯಲ್ಲಿ ಭಾಗವಹಿಸಿರುತ್ತಾರೆ.
ಜೆಸಿಕಾ ಅವರು ರಾಜ್ಯ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದು, 2010ರಲ್ಲಿ ರಾಜಸ್ತಾನ ದಲ್ಲಿ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ.
ಜೆಸಿಕಾ ಅವರು ಕ್ರೀಡಾ ಲೋಕಕ್ಕೆ ಮಾತ್ರ ಸೀಮಿತವಾಗಿರದೆ, ನಾಟಕ, ಚಿತ್ರಕಲೆ, ಡಾನ್ಸ್, ಮುಂತಾದ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಕಲಿಕೆಯಲ್ಲೂ ಇವರು ಎತ್ತಿದ ಕೈ. B.P.Ed ನಲ್ಲಿ 2ನೇ ರ್ಯಾಂಕ್ ಹಾಗೂ M.P.Ed ನಲ್ಲೂ 2ನೇ ರ್ಯಾಂಕ್ ಪಡೆದು ಸೈ ಎನಿಸಿಕೊಂಡಿದ್ದಾರೆ.
ಸೈನ್ಯದಲ್ಲಿ ಡ್ರಿಲ್ ಇನ್ಸ್ಟ್ರಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡೊರ್ಜೆ ಜೋಷ್ವಾ ಇವರೊಂದಿಗೆ ವಿವಾಹವಾದ ಇವರು ವಲೇರಿಯನ್ ಫೆರ್ನಾಂಡಿಸ್ ಹಾಗೂ ಲವೀನಾ ಫೆರ್ನಾಂಡಿಸ್ ದಂಪತಿಗಳ ಪುತ್ರಿ.
ಸದ್ಯ ಡಾರೆಲ್ ಜೆಸಿಕಾ ಫೆರ್ನಾಂಡಿಸ್ ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂಬ ಆಶಯ ನಮ್ಮದು..
ಬರಹ: ಲಾವಣ್ಯ. ಎಸ್, ಪತ್ರಿಕೋದ್ಯಮ ವಿದ್ಯಾರ್ಥಿನಿ, ಸಂತ ಫಿಲೋಮಿನಾ ಕಾಲೇಜು ಪುತ್ತೂರು