Connect with us

ಸುಳ್ಳು ಸುದ್ದಿ ಆಧರಿಸಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದ ನೂರಾರು ವಲಸೆ ಕಾರ್ಮಿಕರು

Published

on

ಸುಳ್ಳು ಸುದ್ದಿ ಆಧರಿಸಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ದೌಡಾಯಿಸಿದ ನೂರಾರು ವಲಸೆ ಕಾರ್ಮಿಕರು

ಮಂಗಳೂರು: ಲಾಕ್ ಡೌನ್ ಹಿನ್ನಲೆಯಲ್ಲಿ ರೈಲು ಸಂಚಾರ ಇನ್ನೂ ಆರಂಭಗೊಳ್ಳದಿದ್ದರೂ, ಉತ್ತರ ಭಾರತ ಮೂಲದ ನೂರಾರು ವಲಸೆ ಕಾರ್ಮಿಕರು ಬೆಳ್ಳಂ-ಬೆಳಗ್ಗೆ, ನಗರದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ದೌಡಾಯಿಸಿದ್ದರು.

ಮೊದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುವಾಗ, ಈ ಪಾಟಿ ಜನ ಜಮಾಯಿಸಿದ್ದನ್ನು ಕಂಡು ಕ್ಷಣಕಾಲ ಪೊಲೀಸರಿಗೆ ದಿಗಿಲಾಗಿದೆ.

ಗುಂಪು-ಗುಂಪಾಗಿ ಸೇರಿದ ಕಾರ್ಮಿಕರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸಪಡುತ್ತಿದ್ದಾರೆ.

ಇತ್ತ ಕೆಲಸವೂ ಇಲ್ಲದೆ, ಅತ್ತ ಲಾಕ್‌ ಡೌನ್‌ ನಿಂದ ಊರಿಗೂ ಹೋಗಲಾಗದ ವಲಸೆ ಕಾರ್ಮಿಕರು ದೇರೆಬೈಲ್, ಸುರತ್ಕಲ್, ಕೆಪಿಟಿ, ನಂತೂರು, ಕೂಳೂರು ಕಡೆಯಲ್ಲಿ ಬಾಕಿಯುಳಿದಿದ್ದ ಸುಮಾರು 700ಕ್ಕೂ ಅಧಿಕ ಮಂದಿ,

ತಮ್ಮ-ತಮ್ಮ ಊರುಗಳಿಗೆ ತೆರಳಲು, ರೈಲು ಸೌಲಭ್ಯ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ತಪ್ಪು ಮಾಹಿತಿಯನ್ನಾಧರಿಸಿ, ಕುಟುಂಬ ಸಮೇತ ಗಂಟು ಮೂಟೆ ಕಟ್ಟಿಕೊಂಡು ಕಾಲ್ನಡಿಗೆಯಲ್ಲೇ ಇಂದು ಬೆಳಗ್ಗೆ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಉತ್ತರಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ತಾನ, ಅಸ್ಸಾಂ ಮತ್ತಿತರ ರಾಜ್ಯದ ವಲಸೆ ಕಾರ್ಮಿಕರು ಗುಂಪಾಗಿ ಬಂದು ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿದ್ದಾರೆ.

ಅವರನ್ನು ರೈಲ್ವೆ ಮತ್ತು ಪಾಂಡೇಶ್ವರ ಠಾಣೆಯ ಪೊಲೀಸರು ನಿಯಂತ್ರಿಸುವಷ್ಟರಲ್ಲಿ ಸುಸ್ತಾಗಿದ್ದಾರೆ.

ಈ ನಡುವೆ ರೊಚ್ಚಿಗೆದ್ದ ಕಾರ್ಮಿಕರು ಪೊಲೀಸರೊಂದಿಗೆ ಮಾತಿನ ಚಕಮಕಿಗೆ ಇಳಿದಿದ್ದಾರೆ. ಈ ವೇಳೆ ಓರ್ವನನ್ನು ಪೊಲೀಸರು ಬಂಧಿಸಲು ಮುಂದಾದಾಗ ಕಾರ್ಮಿಕರೆಲ್ಲ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು.

ಇದರಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ ಬಂಧನ ಯತ್ನವನ್ನು ಪೊಲೀಸರು ಕೈಬಿಟ್ಟರು.

ಬಳಿಕ ಸ್ಥಳದಲ್ಲೇ ಕುಳಿತು ಧರಣಿ ಆರಂಭಿಸಿದ ಕಾರ್ಮಿಕರು, ಕೈಯಲ್ಲಿ ಪೋಸ್ಟರ್ ಹಿಡಿದು ತಮ್ಮ ಊರುಗಳಿಗೆ ತೆರಳಲು ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ.

ಸ್ಥಳಕ್ಕೆ ಆಗಮಿಸಿರುವ ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ರೈಲ್ವೆ ಅಧಿಕಾರಿಗಳು, ”ನಿಮಗೆ ಮನೆ ಬಾಡಿಗೆ ವಿಚಾರವಾಗಿ ತಕರಾರು ಇದ್ದರೆ ಸ್ಥಳೀಯ ಠಾಣೆಗಳ ಮೂಲಕ ಕ್ರಮ ಕೈಗೊಳ್ಳಲಾಗುವುದು.

ರೇಶನ್ ವ್ಯವಸ್ಥೆ ಕೂಡ ಮಾಡಲಾಗುವುದು. ಇಷ್ಟರವರೆಗೆ ತಾಳ್ಮೆ ವಹಿಸಿದ್ದೀರಿ. ಇನ್ನೂ ಕೆಲ ದಿನ ತಾಳ್ಮೆ ವಹಿಸಿ.

ರಾಜ್ಯ ಸರಕಾರ ಇತರ ರಾಜ್ಯ ಸರಕಾರಗಳ ಜತೆ ಮಾತುಕತೆ ನಡೆಸಿ ನಿಮಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಿದೆ” ಎಂದು ಕಾರ್ಮಿಕರ ಮನವೊಲಿಕೆಗೆ ಮುಂದಾಗಿದ್ದಾರೆ.

ಆದರೆ ಪಟ್ಟುಬಿಡದ ವಲಸೆ ಕಾರ್ಮಿಕರು ಧರಣಿ ಕುಳಿತಿದ್ದಾರೆ.

ವಲಸೆ ಕಾರ್ಮಿಕರನ್ನು ಪಕ್ಷವೊಂದರ ವತಿಯಿಂದ ರೈಲ್ವೆ ಮೂಲಕ ಉಚಿತವಾಗಿ ಕಳುಹಿಸಿಕೊಡಲಾಗುವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಸಂದೇಶವನ್ನು ನಂಬಿ ಇವರು ರೈಲ್ವೆ ನಿಲ್ದಾಣದಕ್ಕೆ ಆಗಮಿಸಿದ್ದಾರೆನ್ನಲಾಗಿದೆ.

ಸದ್ಯ ಈ ರೀತಿಯ ಪರಿಸ್ಥಿತಿ ಮಂಗಳೂರಿನಲ್ಲಿ ನಡೆದಿದ್ದು ಇದೇ ಮೊದಲಲ್ಲ. ಮೊನ್ನೆ-ಮೊನ್ನೆ ಸುಳ್ಳು ಮಾಹಿತಿಗೆ ಕಾರ್ಮಿಕರು ಟೌನ್ ಹಾಲ್ ಗೆ ದೌಡಾಯಿಸಿದ್ದರು.

ಆಮೇಲೆ ಕೂಳೂರು ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಕಾರ್ಮಿಕರು ಹಾಗೂ ಅಧಿಕಾರಿಗಳ ಜೊತೆ ಹೈಡ್ರಾಮ ನಡೆದಿತ್ತು.

ಇದೀಗ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಸರದಿ. ಒಟ್ನಲ್ಲಿ ಇಷ್ಟೆಲ್ಲಾ ನಡೆಯುತ್ತಿರುವಾಗ ಜಿಲ್ಲಾಡಳಿತ ಏನು ಮಾಡುತ್ತಿದೆ, ಕಣ್ಮುಚ್ಚಿ ಕುಳಿತಿದೆಯಾ ಅನ್ನೋ ಅನುಮಾನ ಕಾಡುತ್ತದೆ.

Advertisement
Click to comment

Leave a Reply

Your email address will not be published. Required fields are marked *

LATEST NEWS

ಉಡುಪಿ: ಮಹಿಳಾ, ಮಕ್ಕಳ ಆಸ್ಪತ್ರೆಯಲ್ಲಿ ಎನ್‌ ಆರ್‌ಸಿ ಕೇಂದ್ರ ಇಲ್ಲದಕ್ಕೆ ಗರಂ ಆದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ

Published

on

ಉಡುಪಿ:  ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ  ಶಶಿಧರ್ ಕೋಸಂಬೆ ಅವರು ಶುಕ್ರವಾರ ಸದಸ್ಯರೊಂದಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೌಷ್ಠಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಿಶೇಷ ಆಹಾರ, ಚಿಕಿತ್ಸೆ ಮತ್ತು ಆರೈಕೆ ನೀಡಿ ಆರೋಗ್ಯವನ್ನು ಸುಧಾರಿಸುವ ಮಕ್ಕಳ ಪೌಷ್ಠಿಕಾಂಶ ಪುನರ್ವಸತಿ ಕೇಂದ್ರ ಉಡುಪಿ ಜಿಲ್ಲಾ ಕೇಂದ್ರದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಲ್ಲದೆ ಇರುವುದು ಖೇಧಕರ ಹೇಳಿದರು.

ಪ್ರತಿ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆ ಸೇರಿದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಈ ಕೇಂದ್ರ ಇದೆ. ಆದರೆ ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸರಕಾರದ ಸುಪರ್ದಿಗೆ ಬಂದು  ನಾಲ್ಕು ವರ್ಷಗಳಾದರೂ ಇನ್ನೂ ಎನ್‌ ಆರ್‌ ಸಿಯನ್ನು ಆರಂಭಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬಹಳ ಬೇಸರದ ಸಂಗತಿ. ಈ ಬಗ್ಗೆ ಜಿಲ್ಲಾಡಳಿತ, ಡಿಎಚ್‌ಓ, ಜಿಲ್ಲಾ ಸರ್ಜನ್ ಯಾವ ಕಾರಣಕ್ಕಾಗಿ ಇದನ್ನು ಇನ್ನೂ ಆರಂಭಿಸಿಲ್ಲ ಎಂಬುದರ ಬಗ್ಗೆ ಜಿಲ್ಲಾಡಳಿತದೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಮಕ್ಕಳು ದಾಖಲಾದ ಮೇಲೆ ಪ್ರತಿಯೊಂದು ಹೆಸರು, ತಾಯಿ ಹೆಸರು ದಾಖಲೆ ಮಾಡಿ, ಬಳಿಕ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಆದರೆ ಇಲ್ಲಿ ಕೇಸ್ ಶೀಟ್ ನೋಡಿದರೆ ಹಿನ್ನೆಲೆಯಲ್ಲಿ ಬರೆಯಲಾಗಿದೆ. ವಿವರ ಮಗುವಿನ ತಂದೆ ತಾಯಿ ಹೆಸರು ವಿಳಾಸ ಕೂಡ ಇಲ್ಲ. ಇದರಿಂದ ತಪ್ಪಾದ ಚಿಕಿತ್ಸೆ ನೀಡುವ ಸಾಧ್ಯತೆ ಹೆಚ್ಚು ಇರುತ್ತದೆ. ಇದರಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತದೆ. ಅನಾವಶ್ಯಕವಾಗಿ ಆ ಮಗು ಅನಾರೋಗ್ಯಕ್ಕೆ ತುತ್ತಾಗುತ್ತದೆ. ಆದುದರಿಂದ ವೈದ್ಯರು ಈ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು ಎಂದರು.

Continue Reading

BELTHANGADY

ಶಿರಾಡಿ ಘಾಟ್ ರಸ್ತೆಯಲ್ಲಿ ಭೀಕರ ಅಪಘಾತ, ಮೂವರು ದುರ್ಮರಣ

Published

on

ಶಿರಾಡಿ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರ್ ಮುಖಾಮುಖಿ ಡಿಕ್ಕಿ ಹೊಡೆದು ಈ ಭೀಕರ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ದಾರುಣ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗುಂಡ್ಯ ಸಮೀಪ ನಡೆದಿದೆ.

 

ಕೊಕ್ಕಡ ನಿವಾಸಿ ಚಂದ್ರಶೇಖರ್ ಗೌಡ ,  ಉಜಿರೆ ನಿವಾಸಿಗಳಾದ ಶ್ರೀಧರ್ , ಜನಾರ್ದನ ಕೆರಿಮಾರ್ ಮೃತ ದುರ್ದೈವಿಗಳು. ಧರ್ಮಸ್ಥಳದಿಂದ ಮದ್ಯಾಹ್ನ 1.30ಕ್ಕೆ ಬೆಂಗಳೂರು ಮೂಲಕ ತಿರುಪತಿಗೆ ಹೊರಟಿದ್ದ ಕೆ.ಎಸ್. ಆರ್.ಟಿ.ಸಿ ರಾಜಹಂಸ ಬಸ್ ಮತ್ತು ಬೆಂಗಳೂರಿನಿಂದ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಕಡೆಗೆ ಬರುತ್ತಿದ್ದ ಕಾರು ಶಿರಾಡಿ ಘಾಟ್ ಗಡಿ ಸಮೀಪ ಮುಖಾಮುಖಿ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.

 

ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ನಜ್ಜು ಗುಜಗುಜ್ಜಾಗಿದೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರೆ ಮತ್ತೋರ್ವರು ಆಸ್ಪತ್ರೆ ಸಾಗಿಸುವ ದಾರಿ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.  ಘಟನೆಯಲ್ಲಿ ಸುರೇಶ್ ಎಂಬವರಿಗೂ ಕೂಡಾ ಗಾಯಗಳಾಗಿವೆ ಎಂದು ತಿಳಿದುಬಂದಿದೆ.  ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

Continue Reading

LATEST NEWS

ಸಿಲಿಂಡರ್ ಅಭಾವ: ಬೆಂಗಳೂರಿನ ಜನರಿಗೆ ಕಾದಿದೆ ಮತ್ತೊಂದು ಶಾಕ್!

Published

on

ಬೆಂಗಳೂರು: ಇಸ್ರೇಲ್‌, ಅಮೇರಿಕ ಮತ್ತು ಇರಾನ್‌ ಯುದ್ಧದ ಕಿಚ್ಚು ಈಗಾಗಲೇ ಭಾರತದ ಅಡುಗೆ ಮನೆಯ ಬಾಗಿಲು ತಟ್ಟಿದೆ. ಇದೀಗ ಗ್ಯಾಸ್ ಸಿಲಿಂಡರ್ ಕೊರತೆಯ ನಡುವೆ, ಗ್ರಾಹಕರಿಗೆ ಮತ್ತು ಹೋಟೆಲ್ ಉದ್ಯಮಕ್ಕೆ ಈಗ ಬೆಲೆ ಏರಿಕೆಯ ಬಿಸಿ ಮತ್ತೊಂದು ಶಾಕ್ ನೀಡುವ ಸಾಧ್ಯತೆಯಿದೆ.


ಕಳೆದ ನಾಲ್ಕೈದು ದಿನಗಳಿಂದ ಕಮರ್ಷಿಯಲ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ವ್ಯತ್ಯಯ ಶುರುವಾಗಿದ್ದು, ಹೋಟೆಲ್​ ಮಾಲೀಕರ ಸ್ಥಿತಿ ಅಯೋಮಯವಾಗಿದೆ. ಬೆಂಗಳೂರಿನಲ್ಲಿ ಕೆಲ ಹೋಟೆಲ್​​ಗಳು ಸಹ ಬಂದ್‌ ಆಗಿವೆ. ಹೀಗಿರುವಾಗ ಅಡುಗೆ ಎಣ್ಣೆ ಅಂಗಡಿಯ ಸರದಿ ಶುರುವಾಗಿದೆ. ಕಮರ್ಷಿಯಲ್ ಗ್ಯಾಸ್​ನಂತೆ ಅಡುಗೆ ಆಯಿಲ್ ಅಂಗಡಿಗಳು ಕೂಡ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಕುರಿತು ಅಡುಗೆ ಎಣ್ಣೆ ಮಾಲಿಕರೊಬ್ಬರು ಪ್ರತಿಕ್ರಿಯಿಸಿದ್ದು, ಕಳೆದ 1 ವಾರದಿಂದ ಅಡುಗೆ ಎಣ್ಣೆ ಸರಬರಾಜು ಆಗುತ್ತಿಲ್ಲ. 100-200 ಬಾಕ್ಸ್‌ ಎಣ್ಣೆ ಬುಕ್‌ ಮಾಡಿದರೆ 20-50 ಬಾಕ್ಸ್‌ ಮಾತ್ರ ಕಳುಹಿಸುತ್ತಾರೆ. ಏಜೆಂಟರಲ್ಲಿ ಕೇಳಿದರೆ, ಸಪ್ಲೈ ಆಗುತ್ತಿಲ್ಲ. ಹೆಚ್ಚು ಬಾಕ್ಸ್‌ ನೀಡಲು ಆಗಲ್ಲ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ 15-20 ರೂ. ದರ ಜಾಸ್ತಿ ಆಗಿರುವುದರಿಂದ ನಮಗೆ ತುಂಬಾ ಸಮಸ್ಯೆ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಸೀಮೆಎಣ್ಣೆ ಹಂಚಿಕೆ ಮತ್ತು ಆಮದು ನೀತಿಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದ ಹೊಸ ನಿರ್ಧಾರ

ಗ್ಯಾಸ್ ಅಭಾವ ಮತ್ತು ಕಪ್ಪು ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಖರೀದಿಸಬೇಕಾದ ಅನಿವಾರ್ಯತೆಯಿಂದಾಗಿ ಹೋಟೆಲ್ ಆಹಾರ ಪದಾರ್ಥಗಳ ಬೆಲೆ ಹೆಚ್ಚಳವಾಗುವ ಭೀತಿ ಎದುರಾಗಿದೆ. ಇರಾನ್-ಇಸ್ರೇಲ್ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ತೀವ್ರ ಕೊರತೆ ಕಾಡುತ್ತಿದೆ. ನಗರದ ಕೆಲವು ಹೋಟೆಲ್‌ಗಳು ಮತ್ತು ಪಿಜಿಗಳಲ್ಲಿ ಅಡುಗೆ ಮಾಡಲು ಗ್ಯಾಸ್ ಇಲ್ಲದೆ ಮತ್ತೆ ಹಳೆಯ ಪದ್ಧತಿಯಂತೆ ಸೌದೆ ಒಲೆಗಳನ್ನು ಬಳಸುವ ಅನಿವಾರ್ಯತೆ ಎದುರಾಗಿದೆ.

Continue Reading
Advertisement

Trending

Copyright © 2025 Namma Kudla News

You cannot copy content of this page