ಮಂಗಳೂರು: ರೀಲ್ ಹೆಸ್ರು ಹರೀಶ್ ರಿಯಲ್ ಹೆಸ್ರು ರಾಮ್‌ಪ್ರಸಾದ್, ರೀಲ್ ವೃತ್ತಿ ಕೆಎಂಎಫ್ ಮಂಗಳೂರು ಇದರ ನಿರ್ದೇಶಕ, ರಿಯಲ್ ವೃತ್ತಿ ಅಮಾಯಕರ ದುಡ್ಡು ಹೊಡೆಯೋದು. ಈತನ ಊರು ಬಂಟ್ವಾಳ ತಾಲೂಕಿನ ಸಾಲೆತ್ತೂರು ಗ್ರಾಮದ ಮಲಾರು.

ಆರೋಪಿ ರಾಮ್‌ಪ್ರಸಾದ್ ಯಾನೆ ಹರೀಶ್
ಈತನ ತಂದೆ ಮಲಾರು ಮೋಹನ್ ರಾವ್, ಅವರು ವೃತ್ತಿಯಲ್ಲಿ ಶಿಕ್ಷಕ, ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಕೇರಳ ಸರ್ಕಾರವು ಅವರಿಗೆ ಅತ್ಯುತ್ತಮ ರಾಜ್ಯ ಶಿಕ್ಷಕ ಎಂಬ ಪ್ರಶಸ್ತಿ ನೀಡಿ ಗೌರವಿಸದ್ದರು. ಆದರೆ ಮಗ ಮಾತ್ರ ಪಕ್ಕ 420.
ಕೆಎಂಎಫ್‌ನಲ್ಲಿ ಕೆಲಸ ಕೊಡ್ತೇನೆ ಎಂದು ಬರೋಬ್ಬರಿ 150 ಜನರಿಗೆ 2.50 ಕೋಟಿ ರೂಪಾಯಿಗೂ ಹೆಚ್ಚು ನಾಮ ಎಳೆದಿದ್ದಾನೆ. ರಾಮ್‌ಪ್ರಸಾದ್ ಯಾನೆ ಹರೀಶ್ ನನ್ನು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರ ನೇತೃತ್ವದಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರಿಗೊಪ್ಪಿಸಿದ್ದಾರೆ.

ಫೇಕ್ ವಿಸಿಟಿಂಗ್ ಕಾರ್ಡ್
ರಾಮ್‌ಪ್ರಸಾದ್ ಯಾನೆ ಹರೀಶ್ ಅಮಾಯಕರಿಗೆ ಕೆಎಂಎಫ್ ಮಂಗಳೂರು ಇದರ ವಿವಿಧ ವಿಭಾಗಗಳಲ್ಲಿ ಕೆಲಸ ಕೊಡಿಸುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಕೆಎಂಎಫ್ ಹೆಸರಿನಲ್ಲಿ ಬೆಂಗಳೂರಿನಿಂದ ತರಬೇತುದಾರರನ್ನು ಕರೆಸಿ ಪುತ್ತೂರು ಮತ್ತು ಮಂಗಳೂರಿನ ಉರ್ವಾದಲ್ಲಿ 15 ದಿನಗಳ ಟ್ರೈನಿಂಗ್ ಕೊಟ್ಟಿದ್ದಾನೆ. ಕೆಲವರಿಗೆ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿ ವಂಚನೆ ಮಾಡುತ್ತಿದ್ದ. ಈತ ಪ್ರತೀ ವ್ಯಕ್ತಿಯಿಂದ ಕಡಿಮೆ ಎಂದರೆ 50 ಸಾವಿರದಿಂದ ಹಿಡಿದು 3.50 ಲಕ್ಷ ರೂಪಾಯಿವರೆಗೆ ಹಣ ಪಡೆದುಕೊಂಡಿದ್ದಾನೆ.

ಸಿಸಿಬಿ ಕಚೇರಿ ಮುಂದೆ ನ್ಯಾಯಕ್ಕಾಗಿ ಅಲೆದಾಡುತ್ತಿರುವ ಸಂತ್ರಸ್ತರು
ಅದು ಗೂಗಲ್ ಪೇ, ಕ್ಯಾಶ್, ಬ್ಯಾಂಕ್ ಟ್ರಾನ್ಸಫರ್ ಸೇರಿ ಹಲವು ವಿಧಗಳಲ್ಲಿ ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. ಈ ಕ್ರಿಮಿನಲ್ ಆರೋಪಿಯ ವಂಚನೆ ತಿಳಿಯದ ಹಲವಅರ ಅಮಾಯಕರು ಮೋಸ ಹೋಗಿದ್ದಾರೆ.
ಒಂದೇ ಕುಟುಂಬದ 15 ಮಂದಿ ಸದಸ್ಯರಿಗೆ ಕೆಲಸ ಕೊಡಿಸುವ ಭರವಸೆ ನೀಡಿ ಬರೋಬ್ಬರಿ 15 ಲಕ್ಷ ರೂಪಾಯಿಗಳನ್ನು ಜೇಬಿಗಿಳಿಸಿದ್ದು ಇದೀಗ ಈ 15 ಮಂದಿ ಸದಸ್ಯರು ಇತ್ತ ದುಡ್ಡೂ ಇಲ್ಲ ಅತ್ತ ಕೆಲಸವೂ ಇಲ್ಲದೆ ಅತಂತ್ರರಾಗಿದ್ದಾರೆ.
ಇಷ್ಟೆ ಅಲ್ಲದೆ ಅಮಾಯಕ ನಿರುದ್ಯೋಗಿ ಯುವತಿಯರಿಗೂ ವಂಚನೆ ಮಾಡಿದ್ದಾರೆ. ಹಲವು ಮಂದಿಯಿಂದ ದುಡ್ಡು ಪಡೆದುಕೊಂಡು ಯುವತಿಯರನ್ನು ಬ್ಲ್ಯಾಕ್ ಮೇಲ್ ಕೂಡಾ ಮಾಡುತ್ತಿದ್ದ. ಬೆಂಗಳೂರಿನ ಕೆಎಂಎಫ್‌ಗೂ ಡೈರಿಗೆ ಕೆಲ ಸಂತ್ರಸ್ತರನ್ನು ಕರೆದುಕೊಂಡು ಹೋಗಿ ಕೆಲಸದ ಪ್ರಾತ್ಯಕ್ಷಿಕೆ ತೋರಿಸಿದ್ದಾನೆ.
ನೂರಾರು ಅಮಾಯಕರು ಈ ಮಹಾ ಮೋಸಗಾರನಿಂದ ವಂಚನೆಯಾಗಿದ್ದುದ್ದನ್ನು ತಿಳಿದ ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಅವರು ಪೂರ್ಣ ಮಾಹಿತಿ ಪಡೆದು ಆತನನ್ನು ಕರೆಸಿಕೊಂಡು ವಿಷಯ ಕೇಳಿದಾಗ ವಂಚನೆಯನ್ನು ಬಾಯ್ಬಿಟ್ಟಿದ್ದಾನೆ.

ನಕಲಿ ಬ್ಯಾಂಕ್ ಸ್ಟೇಟ್‌ಮೆಂಟ್
ಮತ್ತೊಬ್ಬನಿಗೂ ಕೊಟ್ಟಿದ್ದಾನಂತೆ ವಂಚನೆ ಪಾಲು
ಹರೀಶ್ ಯಾನೇ ರಾಮ್‌ಪ್ರಸಾದ್ ಹೇಳಿರುವಂತೆ ಈ ದಂಧೆಯಲ್ಲಿ ಚಿಕ್ಕಮಗಳೂರಿನ ಕೊಪ್ಪ ಮೂಲದ ನಿವಾಸಿ ಮಲ್ಲೇಶ್ ಯಾನೆ ಹೇಮಂತ್ ಎಂಬಾತನೂ ಸೇರಿಕೊಂಡು ವಂಚನೆ ಮಾಡಿದ್ದಾನೆ. ಈ ಹಿಂದೆ ಇವರಿಬ್ಬರೂ ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯ ಆಗಿದೆ. ಇದೀಗ ಈ ದಂಧೆಯಲ್ಲಿ ಆತನಿಗೆ 1.50 ಕೋಟಿ ರೂ ಕೊಟ್ಟಿದ್ದಾನೆ.
ಈತನ ಹತ್ತಿರವಿದೆ 10 ಕ್ಕೂ ಹೆಚ್ಚು ಬ್ಯಾಂಕ್ ಅಕೌಂಟ್
ಈತನ ಬಳಿ 10-14 ಬೇರೆ ಬೇರೆ ಬ್ಯಾಂಕ್‌ನ ಅಕೌಂಟ್‌ಗಳಿವೆ. ಇದರ ಮೂಲಕ ಹಲವರ ಹಣ ಈ ಅಕೌಂಟ್‌ಗೆ ತಲುಪುವಂತೆ ಮಾಡುತ್ತಿದ್ದ. ಸಹಕಾರಿ ಬ್ಯಾಂಕ್, ಖಾಸಗಿ ಬ್ಯಾಂಕ್, ಸರಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲೂ ಹರೀಶನ ಅಕೌಂಟ್ ಇದೆಯಂತೆ.

ನಕಲಿ ಚೆಕ್
ಈತನ ಬಳಿ ಇರುವುದೆಲ್ಲ ಫೇಕ್ ಫೇಕ್ ಫೇಕ್
ವಿಶೇಷ ಅಂದ್ರೆ ಈತನ ಬಳಿ ತಾನು ಕೆಎಂಎಫ್ ನಿರ್ದೇಶಕ ಎಂಬ ಹೆಸರಿನ ವಿಸಿಟಿಂಗ್ ಕಾರ್ಡ್ ಇದೆ. ಜೊತೆಗೆ ಬ್ಯಾಂಕ್ ಟ್ರಾನ್ಸ್‌ಎಕ್ಷನ್‌ಗಳನ್ನು ಸಾಫ್ಟ್‌ವೇರ್ ಉಪಯೋಗಿಸಿ ನಕಲಿ ತಯಾರು ಮಾಡುತ್ತಿದ್ದ. ಬ್ಯಾಂಕ್ ಸ್ಟೇಟ್‌ಮೆಂಟ್, ಬ್ಯಾಂಕ್ ಚೆಕ್ ಹೀಗೆ ಎಲ್ಲವೂ ಈತನ ಬಳಿಯಿದೆ ಆದ್ರೆ ಅದೆಲ್ಲವೂ ಫೇಕ್ ಫೇಕ್ ಪೇಕ್.!!
ಹಲವರಿಗೆ ನಾಮ ಇಕ್ಕಿದ ಭೂಪ
ರಾಮ್‌ಪ್ರಸಾದ್ ಕೆಎಂಎಫ್ ಮಾತ್ರವಲ್ಲ ಈ ಹಿಂದೆ ಆರ್‌ಡಿಪಿಆರ್, ಎಂಆರ್‌ಪಿಎಲ್ ಅಧೀನದ ಒಎಂಪಿಎಲ್, ಎಸ್ ಡಿ ಎ, ಎಫ್‌ಡಿಎ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯದೇ ಕೆಲಸ ಕೊಡಿಸುತ್ತೇನೆಂದು ನಂಬಿಸಿ ವಂಚಿಸಿದ್ದ ಆರೋಪಗಳಿವೆ ಈ ಹರೀಶನ ಮೇಲೆ.
ಬಜ್ಪೆಯಲ್ಲಿ ಕಂಬಿ ಎಣಿಸಿದ್ದ ಆರೋಪಿ
ಈ ಹಿಂದೆ ಆರ್‌ಡಿಪಿಆರ್, ಒಎಂಪಿಎಲ್‌ನಲ್ಲಿ ಕೆಲಸ ಕೊಡಿಸುತ್ತೇನೆಂದು ಇದೇ ರೀತಿ ಫ್ರಾಡ್ ಮಾಡಿದ್ದ ಅದರಲ್ಲಿ ಕೆಲವರು ದೂರು ನೀಡಿದ್ದ ಹಿನ್ನೆಲೆ ಮೂಡುಬಿದಿರೆ ಠಾಣೆಗೆ ಕರೆಸಿಕೊಂಡು ಅದನ್ನು ಅಲ್ಲೇ ಮುಗಿಸಿದ್ದರು.
ಅದಾದ ನಂತರ ಬಜ್ಪೆ ಠಾಣೆಯಲ್ಲಿ ಆತನ ವಿರುದ್ಧ ವಂಚನೆ ಕೇಸ್ ದಾಖಲಾಗಿ 6 ದಿನ ಕಂಬಿ ಎಣಿಸಿದ್ದ. ಆದ್ರೆ ಅಲ್ಲನೂ ಈ ಅಸಮಿ ಜಾಮೀನು ಪಡೆದು ಹೊರಗೆ ಬಂದಿದ್ದ.

ಸಂತ್ರಸ್ತನೊಬ್ಬನಿಗೆ ಕೊಟ್ಟ ಫೇಕ್ ಐಡಿ
ಸಂತ್ರಸ್ಥರು ತಾಯಿಯ ಪಿಎಫ್ ಹಣ, ಫೈನಾನ್ಸ್‌ನಿಂದ ಸಾಲ ತೆಗೆದು ಹಣ ಕೊಟ್ಟಿದ್ದಾರೆ
ಕೆಲಸ ಸಿಗುತ್ತದೆ ಎಂಬ ಖುಷಿಯಲ್ಲಿ ಕೆಲ ಸಂತ್ರಸ್ಥರು ಇದ್ದ ಕೆಲಸವನ್ನು ಬಿಟ್ಟು ಈಗ ನಿರುದ್ಯೋಗಿಗಳಾಗಿದ್ದಾರೆ.
ಕೊಣಾಜೆ ಮೂಲದ ಯುವಕನೊಬ್ಬ 20 ವರ್ಷ ತಾಯಿ ದುಡಿದು ಕೂಡಿಟ್ಟ ಪಿಎಫ್ ಹಣ ಜೊತೆಗೆ ಬ್ಯಾಂಕ್‌ನಿಂದ ಸಾಲ ತೆಗೆದು ಒಟ್ಟು 3.50 ಲಕ್ಷ ರೂಪಾಯಿ ಹೊಂದಿಸಿ ಕೊಟ್ಟಿದ್ದೇನೆ ಎನ್ನುವಾಗ ಆತನ ಕಣ್ಣಾಲಿಗಳು ತೇವವಾಗಿದ್ದವು.
ಮತ್ತೊಬ್ಬರು ಫೈನಾನ್ಸ್‌ನಿಂದ 60 ಸಾವಿರ ಹಾಗೂ ತಾಯಿ ಚಿನ್ನವನ್ನು ಅಡವಿಟ್ಟು ಈತನಿಗೆ 1.80 ಲಕ್ಷ ರೂಪಾಯಿ ಕೊಟ್ಟಿದ್ದಾರಂತೆ, ಮತ್ತೊಬ್ಬ ನವ ವಿವಾಹಿತ ಯುವಕ ಮದುವೆಯಾಗಿ 3 ತಿಂಗಳಲ್ಲೇ ಹೆಂಡತಿಯ ಚಿನ್ನವನ್ನು ಅಡವಿಟ್ಟು 1.90 ಲಕ್ಷ ರೂಪಾಯಿ ಕೊಟ್ಟಿದ್ದಾನೆ.
ಮತ್ತೊಬ್ಬ ಅಮಾಯಕ ಮಹಿಳೆ ಪತಿಗೆ ತಿಳಿಯದಂತೆ 80 ಸಾವಿರ ರೂಪಾಯಿ ಹಣ ಕೊಟ್ಟಿದ್ದಾರೆಂದು ಮಾಧ್ಯಮಗಳಿಗೆ ಮಾಹಿತಿ ನೀಡುವ ವೇಳೆ ಕಣ್ಣೀರು ತುಂಬಿಹೋಗಿತ್ತು.

ಫೇಕ್ ಅಪಾಯಿಂಟ್ ಮೆಂಟ್ ಲೆಟರ್
ಎಲ್ಲಿಯವರೆಗೂ ಮೋಸ ಹೋಗ್ತಾರೋ ಅಲ್ಲಿಯವರೆಗೂ ಮೋಸ ಮಾಡ್ತಾರೆ
ಇಂತಹ ಮೋಸ, ವಂಚನೆ ಪ್ರಕರಣಗಳು ಆಗಾಗ ಕಂಡುಬಂದರೂ ಸರಕಾರಿ ಅಥವಾ ಹೆಚ್ಚಿನ ಸಂಬಳದ ಆಸೆಗಾಗಿ ಕಳ್ಳದಾರಿಯ ಮೂಲಕ ಇಂತಹವರಿಗೆ ಹಣ ನೀಡಿ ಕೈ ಸುಟ್ಟುಕೊಳ್ಳುತ್ತಾರೆ. ಈ ವಂಚನೆಯಲ್ಲಿ ಹಣ ಕಳೆದುಕೊಂಡವರು ಹೆಚ್ಚಿನವರು ಪದವಿ ತರಗತಿ ಕಲಿತು ಉತ್ತಮ ಉದ್ಯೋಗದಲ್ಲಿದ್ದವರೇ ಎಂಬುವುದು ವಿಶೇಷ.
ಆದರೆ ಹೆಚ್ಚಿನ ವೇತನದ ಮತ್ತು ಸರಕಾರಿ ಉದ್ಯೋಗಕ್ಕೆ ಆಸೆ ಬಿದ್ದು ಈ ರೀತಿ ಹಣ ಕೊಟ್ಟು ಸಾರ್ಟ್ ಕಟ್ ನಲ್ಲಿ ನುಳುಸಲು ಯತ್ನಿಸುತ್ತಾರೆ . ಇದರಿಂದ ಪ್ರತಿಭಾವಂತರೂ ಕೆಲಸ ಕಳೆದುಕೊಳ್ಳುವ ಭೀತಿ ಇದೆ. ಇನ್ನಾದರೂ ಇಂತಹ ಕೆಲಸ ಕೊಡುತ್ತೇನೆ.
ಚೈನ್ ಲಿಂಕ್ ವ್ಯವಹಾರ, ಪುಟಗಟ್ಟಲೇ ಬರೆದುಕೊಡುವ ಉದ್ಯೋಗ ಸೇರಿ ಹೀಗೆ ಹಲವು ಸಂಸ್ಥೆಗಳಿಗೆ ಸೇರುವ ಮುನ್ನ ಯೋಚಿಸಿ ಯೋಚಿಸಿ, ಎಲ್ಲಿಯವರೆಗೂ ನಾಮ ಇಕ್ಕಿಸಿಕೊಳ್ಳುವವರು ಇರ್ತಾರೋ ಅಲ್ಲಿಯವರೆಗೆ ನಾಮ ಹಾಕಿಸಿಕೊಳ್ಳುವವರು ಇದ್ದೇ ಇರುತ್ತಾರೆ ಎಂಬುವುದು ಕಟು ಸತ್ಯ..