ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣದ ಆರೋಪಿ ನಾಪತ್ತೆಯಾಗಿ ಇಂದಿಗೆ 19 ದಿನಗಳು ಕಳೆದಿದೆ. ಇದಕ್ಕಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರು 4 ತಂಡಗಳನ್ನು ರಚಿಸಿದ್ದು, ಆದರೂ ಪ್ರಮುಖ ಆರೋಪಿ ಪತ್ತೆಯಾಗಿಲ್ಲ.

ಈ ಘಟನೆ ನಡೆದ ನಂತರದಲ್ಲಿ ಪೊಲೀಸರ ಪ್ರತಿಯೊಂದು ನಡೆ ಅನುಮಾನಾಸ್ಪದವಾಗಿದೆ ಎಂದು ಇಲಾಖೆಯ ಸಿಬ್ಬಂದಿಯೇ ದೂರುತ್ತಿದ್ದು, ಬಡವನಿಗೊಂದು ನ್ಯಾಯ ದುಡ್ಡಿದ್ದವರಿಗೊಂದು ನ್ಯಾಯ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಪ್ರಮುಖ ಆರೋಪಿಯನ್ನು ಬಿಟ್ಟು ಉಳಿದವರನ್ನು ವಶಕ್ಕೆ ಪಡೆದು, ಅಮಾನತು ಮಾಡಿ ಪೊಲೀಸ್ ಇಲಾಖೆ ಕೈತೊಳೆದುಕೊಂಡಿದೆ ಎನ್ನುವುದು ಸಾರ್ವಜನಿಕರ ಆರೋಪ. ಪ್ರಕರಣ ಸುದ್ದಿಯಾದಾಗಿನಿಂದ ಏನೆಲ್ಲಾ ಘಟನಾವಳಿ ನಡೆದಿದೆ ಎಂಬ ಪಿನ್ ಟು ಪಿನ್ ವರದಿ ಇಲ್ಲಿದೆ.
ಘಟನಾವಳಿ ವಿವರ
ನಗರದ ಕಾನೂನು ಕಾಲೇಜಿನಲ್ಲಿ ಕಲಿಯುತ್ತಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿನಿ ಆ.8ರಂದು ನ್ಯಾಯವಾದಿ ಕೆ.ಎಸ್.ಎನ್ ರಾಜೇಶ್ ಅವರ ಕರಂಗಲ್ಪಾಡಿ ಕಚೇರಿಯಲ್ಲಿ ತರಬೇತಿಗಾಗಿ ಸೇರಿದ್ದಳು.
ಸೆ.25ರಂದು ರಾಜೇಶ್ ಭಟ್ ಆತನ ಚೇಂಬರ್ ಒಳಗೆ ಈ ಯುವತಿಯನ್ನು ಕರೆದು ಅಸಭ್ಯವಾಗಿ ವರ್ತಿಸಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಈ ಮೊದಲು ಸಹ ಆಕೆ ಕೆಲಸ ಮಾಡುತ್ತಿರುವ ವೇಳೆ ಸಿಸಿಟಿವಿಯ ಮೂಲಕ ಪೋಟೋ ತೆಗೆದು ಆ ಫೋಟೋವನ್ನು ಆಕೆಗೆ ವಾಟ್ಸಪ್ ಮೂಲಕ ಕಳುಹಿಸಿ ಅಸಭ್ಯ ಮೇಸೆಜ್ ಮಾಡುತ್ತಿದ್ದನು.
ಅ.18ರಂದು ಈ ಬಗ್ಗೆ ಮಂಗಳೂರು ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ.

ಘಟನೆ ನಡೆದ ಎರಡು ದಿನದೊಳಗೆ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆರೋಪಿಯ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ಬರುತ್ತಾರೆ.
ಅ.22ರಂದು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್ ಹಾಗೂ ಬಾರ್ ಅಸೋಸಿಯೇಷನ್ನಿಂದ ರಾಜೇಶ್ ಭಟ್ ಅಮಾನತು ಆಗುತ್ತಾನೆ.
ಅ.27ರಂದು ರಾಜೇಶ್ ಭಟ್‌ಗೆ ತಲೆಮರೆಸಿಕೊಳ್ಳಲು ಸಹಕರಿಸಿದ ಆರೋಪದಲ್ಲಿ ಬೋಂದೆಲ್ ನಿವಾಸಿ ಅನಂತ ಭಟ್ ಎಂಬುವವನ್ನು ಪೊಲೀಸರು ವಶಕ್ಕೆ ಪಡೆಯುತ್ತಾರೆ. ಈತ ರಾಜೇಶ್ ಭಟ್ ಅನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದಾನೆ ಎಂಬ ಆರೋಪದಲ್ಲಿ ಈತನ ಬಂಧನವಾಗುತ್ತದೆ.
ಅ.29ರಂದು ಜಿಲ್ಲಾ 6ನೇ ಹೆಚ್ಚುವರಿ ಸತ್ರ ನ್ಯಾಯಾಲಯದಲ್ಲಿ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಳ್ಳುತ್ತದೆ.

ಅದಾದ ಮರುದಿನ ಅಂದರೆ ಅ.30ರಂದು ನಗರದ ಕ್ಲಾಕ್ ಟವರ್ ಮುಂದೆ ಸರ್ವಕಾಲೇಜು ವಿದ್ಯಾರ್ಥಿ ಸಂಘ ಜೊತೆ ಹಲವು ಸಾಮಾಜಿಕ ಹೋರಾಟಗಾರರು ಸೇರಿ ಪ್ರಮುಖ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸುತ್ತಾರೆ. ಅದರಲ್ಲೂ ಸಂತ್ರಸ್ತೆಯೇ ಪ್ರತಿಭಟನೆಯಲ್ಲಿ ಭಾಗಿಯಾಗಿ ಆರೋಪಿ ಬಂಧನಕ್ಕೆ ಆಗ್ರಹಿಸುತ್ತಾಳೆ.
ನ.2ರಂದು ಸುದ್ದಿಗಾರರಿಗೆ ಮಾಹಿತಿ ನೀಡಿದ ಪೊಲೀಸ್ ಕಮೀಷನರ್, ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಆರೋಪದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಬಂಧನಕ್ಕೆ ಮಂಗಳೂರು ದಕ್ಷಿಣ ವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ನೇತೃತ್ವದಲ್ಲಿ 4 ಪೊಲೀಸ್ ತಂಡ ರಚಿಸಲಾಗಿದೆ.
ಆರೋಪಿ ಪದೇ ಪದೇ ವಾಸ್ತವ್ಯ ಬದಲಾಯಿಸುತ್ತಿದ್ದಾನೆ ಎಂದು ಹೇಳಿಕೆ ನೀಡುತ್ತಾರೆ. ಈ ಪ್ರಕರಣದಲ್ಲಿ ಪವಿತ್ರಾ ಆಚಾರ್ಯ, ಸಂತ್ರಸ್ತೆಯ ಬಾಯ್ ಫ್ರೆಂಡ್ ಧ್ರುವ ಮತ್ತು ಆತನ ತಾಯಿ ಮಹಾಲಕ್ಷ್ಮೀ ಹಾಗೂ ಅನಂತ ಭಟ್ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರುತ್ತಾರೆ.
ಈ ಪ್ರಕರಣದಲ್ಲಿ ಕರ್ತವ್ಯ ಲೋಪದಡಿ ಉರ್ವ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಕಲಾ ಮತ್ತು ಹೆಡ್ ಕಾನ್ಸ್ಟೇಬಲ್ ಪ್ರಮೋದ್ ಅಮಾನತುಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆಗಳು ಆಗಿ 19 ದಿನಗಳು ಕಳೆದಿವೆ. ಪ್ರಕರಣ ದಾಖಲಾದ ದಿನದಿಂದ ಆರೋಪಿ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸುವ ತನಕ ಬಂಧಿಸದೇ ಆತ ಪರಾರಿಯಾಗಲು ಪೊಲೀಸರೇ ಸಹಕರಿಸಿದ್ದಾರೆ ಎಂಬ ಆರೋಪವನ್ನು ಪ್ರತಿಭಟನಾ ನಿರತರೇ ಮಾಡಿದ್ದಾರೆ.

ಅದಾಗಿ ಜಾಮೀನು ಅರ್ಜಿ ವಜಾ ಆಗಿ 8 ದಿನಗಳು ಕಳೆದರೂ ಪೊಲೀಸರು 4 ತಂಡ ಮಾಡಿ ಯಾರನ್ನು ಹುಡುಕುತ್ತಿದ್ದಾರೆ ಎಂಬುವುದೇ ಇದುವರೆಗೂ ಸ್ಪಷ್ಟವಾಗಿಲ್ಲ ಎಂದು ಪ್ರತಿಭಟನೆಯಲ್ಲಿ ಆರೋಪಿಸಿದ್ದಾರೆ.
ಅ.30ರಂದು ಪ್ರತಿಭಟನೆ ನಡೆಸಲು ಅನುಮತಿಗಾಗಿ ಪೊಲೀಸರ ಬಳಿ ಹೋದಾಗ ಗಂಟೆಗಟ್ಟಲೆ ಅಲೆದಾಡಿಸಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ವಿದ್ಯಾರ್ಥಿ ಆರೋಪಿಸಿದ್ದಾರೆ.
ಮಂಗಳೂರು ನಗರಕ್ಕೆ ಎನ್.ಶಶಿಕುಮಾರ್ ಪೊಲೀಸ್ ಆಯುಕ್ತರಾಗಿ ಬಂದಾಗಿನಿಂದ ಸಣ್ಣಪುಟ್ಟ ಪ್ರಕರಣಗಳನ್ನು ಬೇಧಿಸಿ ಸಾಮಾಜಿಕ ಜಾಲತಾಣದ ಹೀರೋ, ಮಂಗಳೂರಿನ ಸೂಪರ್ ಕಾಪ್ ಅನಿಸಿಕೊಂಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಪೊಲೀಸ್ ಕಮೀಷನರದ್ದು ಜಾಣ ನಡೆ ಅನ್ನುತ್ತಿದ್ದಾರೆ ಸ್ವತಃ ಪೊಲೀಸ್ ಮೂಲಗಳು.
ಸದ್ಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಅದಾದ ಬಳಿಕ ಸಮಾನ ಮನಸ್ಕ ಸಂಘಟನೆ ಜೊತೆಗೂಡಿ ಶೀಘ್ರದಲ್ಲಿಯೇ ಉಪವಾಸ ಸತ್ಯಾಗ್ರಹದೊಂದಿಗೆ ಹೈಕೋರ್ಟ್ ಕದ ತಟ್ಟಲು ಸಿದ್ದತೆ ನಡೆಸಲಾಗಿದೆ.
ಉಪವಾಸ ಸತ್ಯಾಗ್ರಹಕ್ಕೆ ಪೊಲೀಸರು ಇದಕ್ಕೆ ಅನುಮತಿ ನೀಡುವುದಿಲ್ಲ ಎಂಬುವುದು ನಮಗೆ ಗೊತ್ತಿದೆ. ಆದರೆ ಅನುಮತಿ ನೀಡದಿದ್ದರೂ ನಾವು ಉಪವಾಸ ನಡೆಸಿಯೇ ತೀರುತ್ತೇವೆ ಎಂದು ವಿದ್ಯಾರ್ಥಿ ಮುಖಂಡರೊಬ್ಬರು ಹೇಳಿದ್ದಾರೆ.
‘ಪ್ರತಿಯೊಂದು ವಿಷಯದಲ್ಲಿ ಜವಾಬ್ದಾರಿ ತೆಗೆದುಕೊಳ್ಳುವ ಕಮೀಷನರ್ ಇಂತಹ ಸೂಕ್ಷ್ಮ ಪ್ರಕರಣದಲ್ಲಿ ಜವಾಬ್ದಾರಿ ತೆಗೆದುಕೊಳ್ಳದೆ ತಂಡ ಮಾಡಿದ್ದೇವೆ ಎನ್ನುತ್ತಾರೆ. ಆದರೆ ಆ ತಂಡ ಈ ತನಕ ಏನು ಮಾಡಿದೆ? ಸಾಮಾಜಿಕ ಕಾರ್ಯಕರ್ತೆ, ಪ್ರಸನ್ನ ರವಿ ಪ್ರಶ್ನಿಸಿದ್ದಾರೆ.