ಮಂಗಳೂರು ನಗರ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ಹೈಟೆಕ್ ಆಸ್ಪತ್ರೆಗಳು ಸ್ಪರ್ಧೆಗೆ ಬಿದ್ದವರಂತೆ ಸೇವೆಯನ್ನು ನೀಡುತ್ತಿವೆ. ಅವುಗಳು ಕೆಲವು ದಶಕಗಳ ಹಿಂದೆ ಇಲ್ಲಿ ಸೇವೆಯನ್ನು ನೀಡುತ್ತಿದೆ. ಆದರೆ ಒಂದೂವರೆ ಶತಮಾನದ ಹಿಂದೆಯೇ ಕರಾವಳಿಗರಿಗೆ ಸೇವೆ ನೀಡುತ್ತಿದ್ದ ವೆನ್‌ಲಾಕ್ ಆಸ್ಪತ್ರೆ ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಭಾರತ ಸ್ವಾತಂತ್ರ್ಯ ಪಡೆಯುವ ನೂರು ವರ್ಷದ ಹಿಂದೆ ಅಂದರೆ 1848ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ನಿರ್ದೇಶಕರ ಮಂಡಳಿಯ ನಿರ್ಧಾರದ ಮೇರೆಗೆ ಮಂಗಳೂರಿನಲ್ಲಿ ಮಿಲಿಟರಿ ಆಸ್ಪತ್ರೆಯು ಸ್ಥಾಪನೆಗೊಂಡಿತು. ಕಾರಣ ಮಂಗಳೂರು ಕರಾವಳಿಯ ಬ್ರಿಟೀಷ್ ಅಧಿಪತ್ಯದ ಪ್ರಮುಖ ಕೇಂದ್ರವಾಗಿತ್ತು. ಇಲ್ಲಿಂದಲೇ ದೇಶ ವಿದೇಶಗಳಿಗೆ ದವಸ ಧಾನ್ಯ, ಗೋಡಂಬಿ, ಬೀಡಿ, ಸಾಂಬರು ಪದಾರ್ಥಗಳು, ಮತ್ತಿತರ ವಸ್ತುಗಳು ರಫ್ತಾಗುತ್ತಿದ್ದುವು.
ಲಕ್ಷಾಂತರ ರೂಪಾಯಿಗಳ ವಿದೇಶಿ ವಿನಿಮಯಗಳನ್ನು ತಂದು ಕೊಡುತ್ತಿದ್ದ ಈ ಕರಾವಳಿ ರಕ್ಷಣೆಗೆ ಸೇನೆ ಅಗತ್ಯವಾಗಿ ಬೇಕಾಗಿತ್ತು. ಈ ನಿಟ್ಟಿದಲ್ಲಿ ಮದ್ರಾಸ್ ಪ್ರಾಂತದ ಅಧಿನದಲ್ಲಿರುವ ಮಂಗಳೂರಿನಲ್ಲಿ ಬ್ರೀಟಿಷ್ ಸೇನೆಯನ್ನು ನಿಯೋಜನೆ ಮಾಡಲಾಗಿತ್ತು, ಈ ಸೇನೆಯ ಮತ್ತು ಅವರ ಕುಟುಂಬದ ಆರೋಗ್ಯ ಸೇವೆಗಾಗಿ ಒಂದು ಪ್ರತ್ಯೇಕ ಆಸ್ಪತ್ರೆಯ ಅವಶ್ಯಕತೆ ಇತ್ತು. ಈ ಹಿನ್ನೆಲೆಯಲ್ಲಿ ಈಗಿನ ಲೇಡಿಗೋಷನ್ ಆಸ್ಪತ್ರೆ ಬಳಿ ಪ್ರಾರಂಭಿಕವಾಗಿ 14ರೂಪಾಯಿ ಬಾಡಿಗೆ ಪಾವತಿಸಿ ಮೊದಲು ಆಸ್ಪತ್ರೆಯನ್ನು ಪ್ರಾರಂಭಿಸಲಾಯಿತು.

ಆರಂಭದ ವರ್ಷದಲ್ಲಿ 45 ಒಳರೋಗಿಗಳು ಮತ್ತು 1447 ಹೊರರೋಗಿಗಳಿಗೆ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. 1851ರಲ್ಲಿ ಆಸ್ಪತ್ರೆಯನ್ನು ಆಗಿನ ಬ್ರಿಟೀಷ್ ಸರಕಾರದಿಂದ ಮಂಜೂರಾದ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.
ಆಗಿನ ಮದ್ರಾಸ್ ಪ್ರಾಂತ್ಯದ ಗವರ್ನರ್ ಆಗಿದ್ದ ಲಾರ್ಡ್ ವೆನ್‌ಲಾಕ್‌ರವರು ಈಗಿನ ಹಂಪನಕಟ್ಟೆಯಲ್ಲಿನ ವೆನ್‌ಲಾಕ್ ಆಸ್ಪತ್ರೆಯಿರುವ ಸ್ಥಳದಲ್ಲಿ 1919ರಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲನ್ನು ಹಾಕಿದರು. ಅಂದಿನಿಂದ ಇದು ವೆನ್ಲಾಕ್ ಆಸ್ಪತ್ರೆಯಾಗಿ ಪುನರ್ ನಾಮಕರಣಗೊಂಡಿತು.
1903ರಲ್ಲಿ ಜಂಪನ್ ಎಂಬ ವ್ಯಾಪಾರಿ ಹಾಂಗ್‌ಕಾಂಗ್‌ನಿಂದ ಈ ಊರಿಗೆ ಭೇಟಿ ನೀಡಿದಾಗ 500 ರೂಪಾಯಿಯನ್ನು ಆಪರೇಷನ್ ಥಿಯೇಟರ್ ನಿರ್ಮಿಸಲು ನೀಡಿದ ಉಲ್ಲೇಖವಿದೆ. ಹಾಗೂ 1938ರಲ್ಲಿ ಪ್ರಥಮ ಅಂಬ್ಯುಲೆನ್ಸ್‌ನ್ನು ಕುಡಿ ಭುಜಂಗರಾವ್, ಬೊಂಬಾಯಿ ಅವರು ತನ್ನ ತಂದೆ ಕುಡಿ ಪದ್ಮನಾಭಯ್ಯನವರ ಸವಿನೆನಪಿಗಾಗಿ ದಾನವಾಗಿ ನೀಡಿದ್ದರು.

ಸೊಳ್ಳೆಗಳಿಂದ ಮಲೇರಿಯಾ ಹರಡುವ ವಿಧಾನವನ್ನು ಕಂಡುಹಿಡಿದ ಸರ್. ರೋನಾಲ್ಡ್ ರಾಸ್‌ರವರು 1894ರಲ್ಲಿ ಇಲ್ಲಿ ಸೇವೆ ಸಲ್ಲಿಸಿದ್ದರು.
1975ರಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರೊ.ಎಸ್.ಆರ್.ಉಳ್ಳಾಲ್ ಅವರ ತಂಡದಿಂದ ತೆರೆದ ಶಸ್ತ್ರಚಿಕಿತ್ಸೆ ನಡೆದ ಹೆಗ್ಗಳಿಕೆ ಈ ಆಸ್ಪತ್ರೆಗೆ ಇದೆ. 1947 ರಲ್ಲಿ ಭಾರತ ಸ್ವಾತಂತ್ರ್ಯದ ಸಂಭ್ರಮದಲ್ಲಿದ್ದಾಗ ವೆನ್ಲಾಕ್ ಆಸ್ಪತ್ರೆ 100 ವರ್ಷಗಳ ಶತಮಾನೋತ್ಸವದ ಸಂಭ್ರಮದಲ್ಲಿತ್ತು.
2013 ರಂದು ಮಂಗಳೂರಿನ ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಹೆಸರನ್ನು ಕುದ್ಮುಲ್ ರಂಗ ರಾವ್ ಮತ್ತು ಲೇಡಿಗೋಶನ್ ಹೆರಿಗೆ ಆಸ್ಪತ್ರೆಗೆ ಉಳ್ಳಾಲ ರಾಣಿ ಅಬ್ಬಕ್ಕಳ ಹೆಸರನ್ನು ಇಡಲು ತೀರ್ಮಾನಿಸಲಾಗಿತ್ತಾರೂ ಆ ಪ್ರಸ್ತಾಪನ ನೆನೆಗುದಿಗೆ ಬಿದ್ದಿದೆ. ಈಗಲೂ ಚಿಕ್ಕಮಗಳೂರು, ಕೊಪ್ಪ, ಉತ್ತರ ಕನ್ನಡ ಸೇರಿದಂತೆ ಉತ್ತರಕರ್ನಾಟಕದ ಹಲವಾರು ಜಿಲ್ಲೆಗಳಿಂದ, ಜೊತೆಗೆ ಪಕ್ಕದ ಕೇರಳ ರಾಜ್ಯದಿಂದ ಇಲ್ಲಿಗೆ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ. ಬ್ರಿಟೀಷ್ ಆಡಳಿತ ಕಾಲದಲ್ಲಿ ಈ ಆಸ್ಪತ್ರೆಯಲ್ಲಿ ಮಡಿಕೇರಿಗರಿಗೆ ವಿಶೇಷ ಪ್ರಾತಿನಿಧ್ಯವನ್ನು ನೀಡಲಾಗಿತ್ತು ಎಂಬುವುದು ಇತಿಹಾಸದಲ್ಲಿ ಉಲ್ಲೇಖವಾಗಿತ್ತು.
ಶತಮಾನ ಹಳೆಯ ವಾಷಿಂಗ್ ಮಷೀನ್ ಇಲ್ಲಿದೆ
ತೀರಾ ಇತ್ತೀಚಿನವರೆಗೂ ಇಲ್ಲಿ ರೋಗಿಗಳ ಬಟ್ಟೆ ಒಗೆಯಲು ಬಿಸಿ ನೀರಿನ ವಾಷಿಂಗ್ ಮಷೀನ್ ಇತ್ತು. ಇದರಲ್ಲಿ ರೋಗಿಗಳಿಗೆ ಆರೈಕೆ ವೇಳೆ ಬಳಸಿದ ಬಟ್ಟೆಗಳನ್ನು ಒಗೆಯಲು ಈ ವಾಷಿಂಗ್ ಮಷೀನ್ ಬಳಸಲಾಗಿತ್ತು. ಕರ್ನಾಟಕದಲ್ಲಿ ಕೇವಲ ಎರಡು ಆಸ್ಪತ್ರೆಗಳಲ್ಲಿ ಮಾತ್ರ ಇಂತಹ ಮೆಷೀನ್‌ಗಳಿದ್ದವು. ಒಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮಾತ್ರ ಇತ್ತು. ತೀರಾ ಇತ್ತೀಚಿನವೆಗೂ ಇದೇ ವಾಷಿಂಗ್ ಮಷೀನ್‌ನಲ್ಲಿ ಬಟ್ಟೆ ತೊಳೆಯಲಾಗುತ್ತಿತ್ತು.
@ ರಾಜೇಶ್ ಫೆರಾವೋ