ಬಜೆಟ್ ಸುಳ್ಳು ಭರವಸೆಗಳ ಕಂತೆ- ನಳಿನ್‌ಕುಮಾರ್ ಕಟೀಲ್
ಗ್ಯಾರಂಟಿ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸದೆ ರಾಜ್ಯದ ಜನತೆಯನ್ನು ವಂಚಿಸಿದ ಕಾಂಗ್ರೆಸ್ ಸರಕಾರ ಇದೀಗ ಸುಳ್ಳು ಭರವಸೆಗಳ ಬಜೆಟ್ ಮಂಡಿಸಿ ಮತ್ತೆ ಜನರ ವಂಚಿಸಲು ಪ್ರಯತ್ನಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಗ್ಯಾರಂಟಿಗಳ ಜಾರಿಗೆ 57,910 ಕೋಟಿ ರೂ. ವೆಚ್ಚ ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಆದರೆ ಆದಾಯ ಸಂಗ್ರಹದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ನಿರುದ್ಯೋಗಿ ಪದವೀಧರರಿಗೆ ಮಾಸಿಕ ಭತ್ಯೆ ನೀಡುವುದಾಗಿ ಘೋಷಿಸಿದ್ದರೂ, ಬಜೆಟ್ ನಲ್ಲಿ ಇದರ ವೆಚ್ಚದ ಉಲ್ಲೇಖವಿಲ್ಲ .ಒಟ್ಟಿನಲ್ಲಿ ಬಜೆಟ್ ಸುಳ್ಳು ಭರವಸೆಗಳ ಕಂತೆಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಸರ್ವರಿಗೂ ಸಮಪಾಲು ಹಾಗೂ ಸಮಬಾಳು ಸರಕಾರದ ನೀತಿಯಾಗಿರಬೇಕು. ಆದರೆ ಸಿದ್ದರಾಮಯ್ಯ ಅವರು ಬಜೆಟ್ ನಲ್ಲೂ ಅಲ್ಪಸಂಖ್ಯಾತರ ತುಷ್ಟೀಕರಣವನ್ನು ಅನುಸರಿಸಿದ್ದಾರೆ. ಬಹುಸಂಖ್ಯಾತರ ಹಿತವನ್ನು ಈ ಬಜೆಟ್ ಕಡೆಗಣಿಸಿದೆ. ನೋಂದಣಿ ಮತ್ತು ಮುದ್ರಾಂಕ ದರ ಹೆಚ್ಚಳ, ವಾಹನಗಳ ತೆರಿಗೆ ಹೆಚ್ಚಳ ಭವಿಷ್ಯದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ನಳಿನ್ ಕುಮಾರ್ ತಿಳಿಸಿದ್ದಾರೆ.
ನಿರಾಶಾದಾಯಕ ಪೊಳ್ಳು ಬಜೆಟ್ : ಶಾಸಕ ವೇದವ್ಯಾಸ್ ಕಾಮತ್.
ಸಿಎಂ ಸಿದ್ದರಾಮಯ್ಯ ಮಂಡಿಸಿದ ಕಾಂಗ್ರೆಸ್ ಸರಕಾರದ ಬಜೆಟ್ ನಲ್ಲಿ ಯಾವುದೇ ಹೊಸ ಘೋಷಣೆ ಮಾಡದೆ ತೀರಾ ನಿರಾಶಾದಾಯಕವಾಗಿದ್ದು, ಇದೊಂದು ಪೊಳ್ಳು ಬಜೆಟ್ ಆಗಿದೆ.

ಬಜೆಟ್ ಮೂಲಕ ಕೇಂದ್ರ ಸರಕಾರವನ್ನು ದೂಷಿಸುವ ಕೆಲಸ ಮಾಡಲಾಗಿದ್ದು ಕೇಂದ್ರ ಸರಕಾರ ಏನು ಮಾಡಿಲ್ಲ ಮತ್ತು ಈ ಹಿಂದಿನ ಬಿಜೆಪಿ ಸರಕಾರ ಈ ರಾಜ್ಯಕ್ಕೆ ಏನೂ ಯೋಜನೆಗಳನ್ನು ಕೊಟ್ಟಿಲ್ಲ ಎಂದು ಬಿಂಬಿಸಲು ಹೊರಟಂತಿದೆ. ಅಲ್ಲದೆ ಮುಂದೆ ನಮ್ಮ ಸರಕಾರಕ್ಕೂ ಏನು ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಈ ಬಜೆಟ್ ಮೂಲಕ ಸರಕಾರ ಒಪ್ಪಿಕೊಂಡಂತಿದೆ.
ಇನ್ನು ಕರಾವಳಿಯ ಪಾಲಿಗೆ ಅತ್ಯಂತ ನಿರಾಶದಾಯಕ ಬಜೆಟ್ ಇದಾಗಿದೆ. ಕಾಂಗ್ರೆಸ್ ನವರು ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಕರಾವಳಿಗೆ ಪ್ರತ್ಯೇಕ ಬಜೆಟ್ ನೀಡದೆ ಜನರನ್ನು ವಂಚಿಸಲಾಗಿದೆ. ಯಾವುದೇ ಒಂದು ಹೊಸ ಯೋಜನೆಗಳನ್ನು ಘೋಷಿಸಲಾಗಿಲ್ಲ.
ಇಡೀ ಬಜೆಟ್ ನಲ್ಲಿ ಯಾವುದೇ ಹೊಸ ಘೋಷಣೆಗಳಿಲ್ಲದೆ ಹಿಂದಿನ ಬಿಜೆಪಿ ಸರಕಾರದ ಯೋಜನೆಯನ್ನೇ ಮುಂದುವರಿಸಿ ನಮ್ಮದು ಎಂಬಂತೆ ಬಿಂಬಿಸುವ ಕೆಲಸವನ್ನು ಈ ಬಜೆಟ್ ಮೂಲಕ ಮಾಡಲಾಗಿದೆ. ಅಲ್ಲದೆ ಗ್ಯಾರೆಂಟಿ ಯೋಜನೆಗಳ ವೈಭವೀಕರಣವನ್ನು ಮಾಡಲಾಗಿದ್ದು, ರಾಜ್ಯಕ್ಕೆ ಈ ಬಜೆಟ್ ನಿಂದ ನ್ಯಾಯ ಪೈಸೆ ಉಪಯೋಗ ಇಲ್ಲದಂತಾಗಿದೆ ಎಂದಿದ್ದಾರೆ.
ಭವಿಷ್ಯದಲ್ಲಿ ‘ಸಿದ್ದು ಟ್ಯಾಕ್ಸ್’ ಲೋಕ ವಿಖ್ಯಾತಿಯಾಗುವ ಅಪಾಯ : ಶಾಸಕ ಸುನೀಲ್ ಕುಮಾರ್
ಸಿಎಂ ಸಿದ್ದರಾಮಯ್ಯನವರು ಬಜೆಟ್ ಪುಸ್ತಕದಲ್ಲಿ ಹೊಸ ಸಂಪ್ರದಾಯವನ್ನು ತುರುಕಿದ್ದಾರೆ. ಹಿಂದಿನ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಿಂದನೆಗೆ ನೀಡಿದಷ್ಟು ಸ್ಥಳಾವಕಾಶವನ್ನು ಹೊಸ ಯೋಜನೆಗಳ ಪ್ರಕಟಣೆಗೆ ನೀಡಿಲ್ಲ. ಈ ಬಜೆಟ್ ನಲ್ಲಿ ಆರ್ಥಿಕ ಮುನ್ನೋಟಕ್ಕಿಂತ ರಾಜಕೀಯ ಹಿನ್ನೋಟವೇ ಜಾಸ್ತಿ ಇದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ೫೨೦೦೦ ಕೋಟಿ ರೂ. ಖರ್ಚಾಗುತ್ತದೆ ಎಂದು ಲೆಕ್ಕಕೊಟ್ಟಿದ್ದರೂ, ಅದಕ್ಕೆ ಯಾವ ಮೂಲದಿಂದ ಹಣಕಾಸು ಹೊಂದಿಸುತ್ತಾರೆಂಬ ಬಗ್ಗೆ ಸ್ಪಷ್ಟತೆ ಇಲ್ಲ. ಜಿಎಸ್ಟಿ ಪರಿಹಾರ, ತೆರಿಗೆ ಹಂಚಿಕೆಯ ವಿಚಾರಗಳಲ್ಲಿ ಕೇಂದ್ರದ ಟೀಕೆ ಮತ್ತು ಅತಾರ್ಕಿಕ ವಿಚಾರಗಳಿಗೆ ಮಾತ್ರ ಮಹತ್ವ ನೀಡಿ ಸತ್ಯ ಮರೆಮಾಚಿದ್ದಾರೆ.
ತೆರಿಗೆ ಪ್ರಸ್ತಾಪವಂತೂ ಭವಿಷ್ಯದಲ್ಲಿ ” ಸಿದ್ದು ಟ್ಯಾಕ್ಸ್ ” ಎಂದೇ ಲೋಕವಿಖ್ಯಾತಿಯಾಗುವ ಅಪಾಯ ಇದೆ. ಅಬಕಾರಿಯೊಂದನ್ನು ಹೊರತುಪಡಿಸಿ ಇನ್ಯಾವ ವಿಭಾಗದಲ್ಲೂ ತೆರಿಗೆ ಹೆಚ್ಚಳದ ಪ್ರಮಾಣ ನಮೂದಿಸಿಲ್ಲ.
ಭವಿಷ್ಯದಲ್ಲಿ ನಾಗರಿಕರ ಜೇಬಿಗೆ ಕತ್ತರಿಯ ಬದಲು ಗರಗಸವನ್ನೇ ಹಾಕುವ ಸಾಧ್ಯತೆ ಹೆಚ್ಚಿದೆ.
ಒಟ್ಟಾರೆಯಾಗಿ ಸಿದ್ದರಾಮಯ್ಯನವರು ಬೆಳಕೇ ಇಲ್ಲದ ಕನಸು ಕಾಣುವುದಕ್ಕೂ ಅನರ್ಹವಾದ ಕತ್ತಲೆಯ ಹಾದಿಗೆ ರಾಜ್ಯದ ಜನರನ್ನು ಎಳೆದೊಯ್ಯುವ ಪ್ರಯತ್ನವನ್ನು ನಡೆಸಿದ್ದಾರೆ. “ಎಡವುವುದಕ್ಕಾಗಿಯೇ ನಡೆದರೆ ಒಪ್ಪುವರೇನಯ್ಯ ? ಎಂದು ಹೊಸ ಕವನದ ಸಾಲು ಸೇರಿಸಿದರೆ ಬಜೆಟ್ ನ ಮೆರಗು ಹೆಚ್ಚಬಹುದು ಎಂದಿದ್ದಾರೆ.